

ಮೈಸೂರು: ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಮೈಸೂರಿನ ಅರಮನೆಯಲ್ಲಿ ಶನಿವಾರ ಸಂಜೆ 5ರಿಂದ 6 ಗಂಟೆಯವರೆಗೆ ತುರ್ತು ಪರಿಸ್ಥಿತಿ ಎಚ್ಚರಿಕೆಯ ಸೈರನ್ ಮೊಳಗಿಸಲಾಯಿತು.
ಮೈಸೂರು ಅರಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಸಿಐಎಸ್.ಎಫ್, ಅಗ್ನಿಶಾಮಕ ಇಲಾಖೆ, ಆರೋಗ್ಯ ಇಲಾಖೆ, ಹೋಮ್ ಗಾರ್ಡ್ ಸೇರಿದಂತೆ ವಿವಿಧ ಇಲಾಖೆಗಳ 500ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು. ನಾಗರಿಕ ರಕ್ಷಣಾ ಕಲ್ಪಿತ ಪ್ರದರ್ಶನ ಕಾರ್ಯಕ್ರಮದಲ್ಲಿ ಮೂರು ವಿಧದ ಸೈರನ್‌ಗಳು ಕೇಳಿಸಿದವು. ತುರ್ತು ಪರಿಸ್ಥಿತಿಯಲ್ಲಿ ಮೊದಲ ಸೈರನ್, ಎರಡನೇ ಸೈರನ್, ಮೂರನೇ ಸೈರನ್ ಸಂದರ್ಭದ ಬಗ್ಗೆ ತಿಳಿಸಲಾಯಿತು.
ಈ ವೇಳೆ ಸೈರನ್‌ಗೆ ಹೇಗೆ ಪ್ರತಿಕ್ರಿಯಿಸಬೇಕು, ಬಾಂಬ್ ಸ್ಫೋಟ ಆದರೆ ಏನು ಮಾಡಬೇಕು, ಬೆಂಕಿ ಹತ್ತಿಕೊಂಡಾಗ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದು ಹೇಗೆ, ಅವಶೇಷಗಳ ಅಡಿ ಸಿಲುಕಿದವರನ್ನು ಹೇಗೆ ರಕ್ಷಿಸಬೇಕು, ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವುದು ಹೇಗೆ ಎಂಬುದನ್ನು ಕಲಿಸಲಾಯಿತು.
ಸೈರನ್ ಮೊಳಗಿದ ಕೂಡಲೇ ನಾಗರಿಕರು ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ದುರ್ಘಟನೆಯಿಂದ ಬೆಂಕಿಯಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಣೆ ಮಾಡುವುದನ್ನು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿ ಪ್ರದರ್ಶಿಸಿದರು.
ಜಿಲ್ಲೆಯಲ್ಲಿ ನಡೆದ ಡಿಫೆನ್ಸ್ ಮಾಕ್ ಡ್ರಿಲ್ ವೇಳೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅಪರ ಜಿಲ್ಲಾಧಿಕಾರಿ ಡಾ ಪಿ .ಶಿವರಾಜು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
ಮೈಸೂರು ಪ್ರಾಂತ್ಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಎಸ್.ಜಯರಾಮಯ್ಯ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಪಿ.ಗುರುರಾಜ್, ಕೆ.ರಮೇಶ್, ಸಂತೋಷ್‌ಕುಮಾರ್, ಡಿಸಿಪಿಗಳಾದ ಎಂ. ಮುತ್ತುರಾಜ್, ಕೆ.ಎಸ್. ಸುಂದರ್‌ರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ, ಅರಣ್ಯ ಇಲಾಖೆ ಉಪ ನಿರ್ದೇಶಕ ಸುಬ್ರಹ್ಮಣ್ಯ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಇತರರು ಇದ್ದರು.
ಜನರ ರಕ್ಷಣೆ ಉದ್ದೇಶದಿಂದ ಈ ಪ್ರದರ್ಶನ:
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಅಣುಕು ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಅಣಕು ಪ್ರದೇಶದ ಮುಖ್ಯ ಉದ್ದೇಶವು ಬಾಂಬ್ ಸ್ಫೋಟದ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಕ್ರಮಕ್ಕೆ ಸಂಬಂಧಿಸಿದ್ದಾಗಿರುತ್ತದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.
ತುರ್ತು ಪರಿಸ್ಥಿತಿ ವೇಳೆ ವಿವಿಧ ಇಲಾಖೆಗಳಿಂದ ಯಾವ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು. ಸಾರ್ವಜನಿಕರು ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ತಿಳಿಸಲು ಬೇರೆ ಬೇರೆ ಇಲಾಖೆಗಳು ಮತ್ತು ಭದ್ರತಾ ಪಡೆಯ ತಂಡಗಳು ಹೇಗೆ ಕಾರ್ಯನಿರ್ವಹಣೆ ಮಾಡಬೇಕು ಮತ್ತು ಎಂತಹದ್ದೇ ಪರಿಸ್ಥಿತಿ ಎದುರಾದರು ಸಹ ಎಲ್ಲರೂ ಸೇರಿ ಅದನ್ನು ಹೇಗೆ ನಿಭಾಯಿಸಬೇಕು ಎಂಬುದರ ಪೂರ್ವ ತಯಾರಿ ಇದಾಗಿದೆ ಎಂದು ತಿಳಿಸಿದರು.
ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಣುಕು ಪ್ರದರ್ಶನ ಯಶಸ್ಸಿಯಾಗಿ ಮಾಡಲಾಗಿದ್ದು ಹೋಮ್ ಗಾರ್ಡ್, ಸಿ.ಐ.ಎಸ್ ಎಫ್, ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸೇರಿದಂತೆ ಒಟ್ಟು 500 ಕ್ಕೂ ಹೆಚ್ಚು ಸಿಬ್ಬಂದಿಗಳು ಅಣುಕು ಪ್ರದರ್ಶನ ಭಾಗವಹಿಸಿದರು.