ಮಾದರಿಯಾಗಿದೆ ಕೃಷ್ಣನಗರ ಸರ್ಕಾರಿ ಶಾಲೆ

background1213
ಕಲ್ಲೂರು ಗ್ರಾಮದ ಕೃಷ್ಣನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೊರ ನೋಟ.
Published on

ಸಿರವಾರ: ಕಲ್ಲೂರು ಗ್ರಾಮದ ಕೃಷ್ಣನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು, ಪಾಲಕರನ್ನು ಆಕರ್ಷಿಸುತ್ತಿದೆ.

ಶಾಲೆಯಲ್ಲಿ 86 ವಿದ್ಯಾರ್ಥಿಗಳಿದ್ದು, ಮೂರು ಜನ ಶಿಕ್ಷಕರಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು, ಉತ್ತಮ ವಾತಾವರಣ, ಆಟದ ಮೈದಾನ, ಮಕ್ಕಳಿಗೆ ಕುಡಿಯಲು ಶುದ್ಧೀಕರಿಸಿದ ನೀರು, ಶೌಚಗೃಹ, ಸ್ವಚ್ಛಂದವಾದ ಅಡುಗೆ ಕೋಣೆ ಶಾಲೆಯ ವಿಶೇಷತೆಗಳಾಗಿವೆ.

ಮಕ್ಕಳಿಗೆ ಸರ್ಕಾರದಿಂದ ಪೂರೈಸುವ ಸಮವಸ್ತ್ರದೊಂದಿಗೆ, ಪಾಲಕರ ಮನವೊಲಿಸಿ ಒಂದು ಜತೆ ಬೇರೆ ಸಮವಸ್ತ್ರವನ್ನೂ ಕೊಡಿಸಲಾಗಿದೆ. ನಾಲ್ಕು ದಿನ ಸರ್ಕಾರಿ ಸಮವಸ್ತ್ರ ಹಾಗೂ ಬುಧವಾರ, ಶನಿವಾರ ಪಾಲಕರು ಕೊಡಿಸಿರುವ ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಾರೆ. ಮಧ್ಯಾಹ್ನದ ಬಿಸಿಯೂಟಕ್ಕೆ ತಟ್ಟೆಗಳನ್ನು ದೇಣಿಗೆಯಾಗಿ ಪಡೆಯಲಾಗಿದೆ. 2004-05ನೇ ಸಾಲಿನಲ್ಲಿ ಕೇವಲ ಒಂದು ಕೊಠಡಿಯೊಂದಿಗೆ ಶಾಲೆ ಆರಂಭವಾಗಿತ್ತು. ನಂತರದ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೊಂದಿಗೆ ಕೊಠಡಿ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ಎಸ್ಡಿಎಂಸಿ ಅಧ್ಯಕ್ಷ ಗಂಗಪ್ಪ ಗ್ರಾಮ ಪಂಚಾಯಿತಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶಾಲೆ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಇದರಿಂದಾಗಿ ಗಂಗಪ್ಪ ಅವರನ್ನು ಎರಡನೇ ಅವಧಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರನ್ನಾಗಿ ಪಾಲಕರು ಆಯ್ಕೆ ಮಾಡಿದ್ದಾರೆ.

ಶಾಲೆಗೆ ವರದಾನವಾದ ನರೇಗಾ: ಇನ್ನು ಶಾಲೆಯ ಸೌಂದರ್ಯ ಹೆಚ್ಚಿಸಲು ನರೇಗಾ ಯೋಜನೆ ನೆರವು ಪಡೆಯಲಾಗಿದೆ. ನರೇಗಾ ಯೋಜನೆಯಡಿ ಐದು ಲಕ್ಷ ರೂ. ವೆಚ್ಚದಲ್ಲಿ ಅಡುಗೆ ಕೋಣೆ, ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಶೌಚಗೃಹ ನಿರ್ಮಿಸಿ ಶಾಲೆಯ ಮೈದಾನ ಸಮತಟ್ಟು ಮಾಡುವುದರೊಂದಿಗೆ ಕಾಂಪೌಂಡ್ ನಿರ್ಮಿಸಲಾಗಿದೆ. ಕಾಂಪೌಂಡ್ ಮೇಲೆ ಗ್ರಾಮೀಣ ಜನರ ಜೀವನ ಶೈಲಿ ಹಾಗೂ ಮಕ್ಕಳ ಕಲಿಕೆಗೆ ಅನುಕೂಲವಾಗುವ ಚಿತ್ತಾರ ಬಿಡಿಸಲಾಗಿದೆ. ಮೈದಾನದಲ್ಲಿ ವಿವಿಧ ಗಿಡಗಳನ್ನು ನೆಟ್ಟು ಮಕ್ಕಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net