

ಸಿರವಾರ : ತಾಲೂಕಿನ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿದ್ದ 305 ಜನರ ವರದಿ ನೆಗೆಟಿವ್ ಬಂದಿದ್ದು, ಜನರು ನಿಟ್ಟಿಸಿರು ಬಿಡುವಂತಾಗಿದೆ.
ಮಹಾರಾಷ್ಟ್ರ, ಬೆಂಗಳೂರು ಸೇರಿ ವಿವಿಧ ಜಿಲ್ಲೆ ಮತ್ತು ನೆರೆ ರಾಜ್ಯದಿಂದ ಬಂದ ಸುಮಾರು 305 ಜನರನ್ನು ಪಟ್ಟಣದ ವಿಆರ್ ಎಸ್ ಶಾಲೆ, ಇಂದಿರಾ ಗಾಂಧಿ ವಸತಿ ಶಾಲೆ, ನವಲಕಲ್ ಮತ್ತು ಮಲ್ಲಟ ಶಾಲೆಯಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಎಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಹಂತ ಹಂತವಾಗಿ ಬಂದ ವರದಿಗಳಲ್ಲಿ ಎಲ್ಲರ ವರದಿಗಳೂ ನೆಗೆಟಿವ್ ಬಂದಿವೆ ಎಂದು ಸಿರವಾರ ತಹಸೀಲ್ದಾರ್ ಕೆ.ಶ್ರುತಿ ತಿಳಿಸಿದ್ದಾರೆ. ಭಾನುವಾರ 4 ಜನ ತಮಿಳುನಾಡಿನಿಂದ ಬಂದಿದ್ದು ಅವರನ್ನು ಕ್ವಾರೆಂಟೈನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಜನರು ಮಾತ್ರ ಭಯವಿಲ್ಲದೆ ದೈಹಿಕ ಅಂತರ ಮರೆತು ವ್ಯಾಪಾರದಲ್ಲಿ ತೊಡಗುತ್ತಿದ್ದಾರೆ. ಬ್ಯಾಂಕ್‌ಗಳ ಮುಂದೆ ಜನರು ಗುಂಪು ಗುಂಪಾಗಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಸೋಮವಾರದ ಸಂತೆಯಲ್ಲಿ ಜನ ಜಂಗುಳಿಯೂ ಸೇರಿತ್ತು.