

ಸಿರವಾರ: ನಿಮ್ಮ ಮೇಲೆ ವಿಶ್ವಾಸವಿಟ್ಟು ಜನ ಆಯ್ಕೆ ಮಾಡಿದ್ದು, ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಗಾಪಂ ಸದಸ್ಯರಾಗಿ ಆಯ್ಕೆಯಾದವರಿಗೆ ಎಐಐಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಕಿವಿ ಮಾತು ಹೇಳಿದರು.
ಪಟ್ಟಣದಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಬೆಂಬಲಿತ ಚುನಾಯಿತ ಗ್ರಾಪಂ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮತ ನೀಡಿದವರ ವಾರ್ಡ್‌ಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಮುಂದೆ ನಡೆಯುವ ಜಿಪಂ, ತಾಪಂ ಚುನಾವಣೆಗೆ ಸಜ್ಜಾಗಿ ಎಂದು ಹುರುದುಂಬಿಸಿದರು. ಕೆಲ ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟವಾಗಲಿದ್ದು, ಎಲ್ಲರೂ ಒಗ್ಗಟಿನಿಂದ ಇರಬೇಕು ಎಂದರು. ಇದೇ ವೇಳೆ ಎಲ್ಲ ಸದಸ್ಯರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ, ಮಲ್ಲಟ ಜಿಪಂ ಸದಸ್ಯ ಕಿರಿಲಿಂಗಪ್ಪ, ಶರಣಯ್ಯ ಗುಡದಿನ್ನಿ, ದಾನನಗೌಡ, ಎಂ.ಶ್ರೀನಿವಾಸ್, ರಮೇಶ ದರ್ಶನಕರ್, ಕಲ್ಲೂರು ಬಸವರಾಜ ನಾಯಕ, ವೀರೇಶ ಗಣೇಕಲ್ ಇತರರು ಇದ್ದರು.