

ಸಿರವಾರ: ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಏ.10 ರಿಂದ 14 ರವರೆಗೆ ಜರುಗಲಿರುವ ಜಗದ್ಗುರು ಶಂಕರಚಾರ್ಯರ ಜಾತ್ರೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಶಿವರಾಮನಂದ ಭಾರತಿ ಸ್ವಾಮೀಜಿ ತಿಳಿಸಿದರು.
ಕಲ್ಲೂರು ಗ್ರಾಮದ ಜಗದ್ಗುರು ಶಂಕರಚಾರ್ಯರ ಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.10 ಮತ್ತು 11 ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, 12 ರಂದು ಸಾಮೂಹಿಕ ವಿವಾಹ, 13 ರಂದು ದತ್ತಾತ್ರೇಯ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಹಾಗೂ ಏ.14 ರಂದು ಭಾರ (ಸಂಗ್ರಾಣಿ ಕಲ್ಲು, ಉಸುಕಿನ ಚೀಲ, ಗುಂಡು) ಎತ್ತುವ ಸ್ಪರ್ಧೆ, ಉತ್ಸವ ಮೂರ್ತಿಗಳ ಮೆರವಣಿಗೆ, ಉಚ್ಚಾಯ ಮತ್ತು ಜಗದ್ಗುರು ಶ್ರೀ ಶಂಕರಾಚಾರ್ಯರ ಮಹಾರಥೋತ್ಸವ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಕಲ್ಲೂರು ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ತನು, ಮನ, ಧನದಿಂದ ಸೇವೆ ಸಲ್ಲಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಕ ಶಿವಪ್ಪ ನಾಯಕ ಕಲ್ಲೂರು, ಪ್ರಮುಖರಾದ ಅಯ್ಯಪ್ಪ ಯಾದವ್, ಹನುಮಂತಪ್ಪ, ಬಾಗಿಲು ಮುದುಕಪ್ಪ ಇದ್ದರು.