ನವಲಕಲ್‌ನಲ್ಲಿ 25ರಿಂದ ಮಯೂರ ಶಿಲೆ ನಾಡೋತ್ಸವ

22 Sirwar 1 abhinava shri
Published on

ಸಿರವಾರ: ತಾಲೂಕಿನ ನವಲಕಲ್ ಬೃಹನ್ಮಠದ ಲಿಂಗೈಕ್ಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರ 26ನೇ ಜಾತ್ರಾ ಮಹೋತ್ಸವ ಅಂಗವಾಗಿ ಫೆ.24 ರಿಂದ ನಾಲ್ಕು ದಿನಗಳ ಕಾಲ ಮಯೂರ ಶಿಲೆ ನಾಡೋತ್ಸವ ನಡೆಯಲಿದೆ ಎಂದು ಶ್ರೀಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ನವಲಕಲ್ ಶಾಖಾ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಫೆ.24ರ ಬೆಳಗ್ಗೆ 9ಕ್ಕೆ ಎತ್ತುಗಳಿಂದ ಕಲ್ಲಿನ ಭಾರ ಎಳೆಯುವ ಸ್ಪರ್ಧೆ, 25ರ ಬೆಳಗ್ಗೆ 8ಕ್ಕೆ ಮಹಿಳೆಯರಿಗಾಗಿ ರಂಗೋಲಿ, ಮನರಂಜನಾ ಸ್ಪರ್ಧೆ, 9 ಗಂಟೆಗೆ ಆಮೆಚೂರು ಕಬಡ್ಡಿ ಅಸೋಷಿಯೇಷನ್‌ನಿಂದ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಬಾಲಕಿಯರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ, ಸಂಜೆ 4ಕ್ಕೆ ರಾಜ್ಯ ಮಟ್ಟದ ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಮತ್ತಿತರ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದರು.

ಫೆ.26ರ ಬೆಳಗ್ಗೆ 6ಕ್ಕೆ ಪಂಚಾಚಾರ್ಯ ಧ್ವಜಾರೋಹಣ, ಸಂಜೆ ಲಿಂಗೈಕ್ಯ ಸೋಮಶೇಖರ ಶಿವಾಚಾರ್ಯರರ ಉಚ್ಛಾಯ ಮಹೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ. 27ರಂದು ಬೆಳಗಿನ ಜಾವ ಶಾಂಭಮೂರ್ತಿ ಹಾಗೂ ಲಿಂ. ಸೋಮಶೇಖರರ ಕರ್ತೃ ಗುದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ. ನಂತರ 51 ಜೋಡಿಗಳ ಸಾಮೂಹಿಕ ವಿವಾಹ, 11 ಗಂಟೆಗೆ ಧರ್ಮ ಸಭೆ ನಡೆಯಲಿದೆ. ಉದ್ಘಾಟಕರಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಬಿ.ಖಂಡ್ರೆ, ಮುಖ್ಯ ಅತಿಥಿಯಾಗಿ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಜಿ.ಮನೋಹರ್ ಅಬ್ಬಿಗೆರೆ ಆಗಮಿಸುವರು. 3 ಗಂಟೆಗೆ ಪಲ್ಲಕ್ಕಿ ಉತ್ಸವ, ಸಂಜೆ ಮಹಾ ರಥೋತ್ಸವ ಜರುಗಲಿದೆ. ನಾಡೋತ್ಸವದಲ್ಲಿ ನಾಡಿನ ವಿವಿಧ ಮಠಾಧೀಶರು, ಗುರು ಹಿರಿಯರು ಭಾಗವಸಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net