ಪ್ರೀತ್ಸೆ, ಪ್ರೀತ್ಸೆ ಎನ್ನುತ್ತಿದ್ದ ಸಿರಾಜ್ ಲಾಕ್

h2-siraz
Published on

ಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯಾಗಿ ಇನ್ನೂ ಒಂದು ವರ್ಷ ಕೂಡ ಗತಿಸಿಲ್ಲ. ಇಂಥದ್ದೇ ಮತ್ತೊಂದು ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಪ್ರೀತ್ಸೆ, ಪ್ರೀತ್ಸೆ ಎಂದು ಯುವತಿಗೆ ಕಿರುಕುಳ ನೀಡಿದ್ದು, ಮನನೊಂದ ಯುವತಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಗರದಲ್ಲಿ ನಡೆದಿದೆ.

ಕಿರುಕುಳ ನೀಡಿದ್ದ ಆರೋಪದಡಿ ಕುಂದಗೋಳ ಪಟ್ಟಣದ ಸಿರಾಜ್ ಹಂಚಿನಾಳ (23) ಎಂಬಾತನನ್ನು ವಿದ್ಯಾನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿದ್ಯಾನಗರದ ಕಾಲೇಜೊಂದರಲ್ಲಿ ಪ್ಯಾರಾಮೆಡಿಕಲ್ ವ್ಯಾಸಂಗ ಮಾಡುತ್ತಿರುವ 20 ವರ್ಷದ ಯುವತಿ ಹಾಗೂ ಸಿರಾಜ್ ಪರಸ್ಪರ ಪ್ರೀತಿಸುತ್ತಿದ್ದರು. ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ಇಬ್ಬರ ಖಾಸಗಿ ಕ್ಷಣದ ಫೋಟೋ ಇಟ್ಟುಕೊಂಡಿದ್ದ ಸಿರಾಜ್, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ನಿತ್ಯ ಬ್ಲಾಕ್‌ಮೇಲ್ ಮಾಡಿ ಕಿರುಕುಳ ಕೊಡುತ್ತಿದ್ದ.

ಕುಂದಗೋಳದಲ್ಲಿ ಅಕ್ಕ ಪಕ್ಕದ ಮನೆಗಳಲ್ಲಿ ಇವರಿಬ್ಬರು ವಾಸ ಮಾಡುತ್ತಿದ್ದರು. ಮೊದಲು ಸ್ನೇಹಿತನಂತೆ ವರ್ತಿಸಿದ್ದ ಸಿರಾಜ್, ಸಲುಗೆ ಬೆಳೆಸಿಕೊಂಡು ಪ್ರೀತಿಸುವ ನಾಟಕವಾಡಿದ್ದಾನೆ ಎನ್ನಲಾಗಿದೆ. ಯುವತಿ ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ರಂಜಾನ್ ಹಬ್ಬದಂದು ನಗರದಲ್ಲಿ ಮಾರಣಾಂತಿಕ ಹಲ್ಲೆ ಕೂಡ ಮಾಡಿದ್ದ ಎಂಬುದಾಗಿ ತಿಳಿದುಬಂದಿದೆ.

ಸಿರಾಜ್ ಕಿರುಕುಳಕ್ಕೆ ಬೇಸತ್ತ ಯುವತಿ ಬುಧವಾರ ಆತ್ಮಹತ್ಯೆ ಯತ್ನ ಮಾಡಿದ್ದು, ಸದ್ಯ ನಗರದ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಯುವತಿಯ ಪಾಲಕರ ಕೊಟ್ಟ ದೂರಿನ ಮೇರೆಗೆ ಯುವಕನ್ನು ವಶಕ್ಕೆ ಪಡೆದಿರುವ ವಿದ್ಯಾನಗರ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಲವ್ ಜಿಹಾದ್?: ಇದೊಂದು ಲವ್ ಜಿಹಾದ್ ಪ್ರಕರಣವೆಂದು ಹಿಂದುಪರ ಸಂಘಟನೆಗಳು ಆರೋಪಿಸಿವೆ. ನೇಹಾ ಹಿರೇಮಠ ಪ್ರಕರಣದಲ್ಲಿ ಇದೇ ರೀತಿಯಾಗಿತ್ತು. ಇಲ್ಲಿಯೂ ಮದುವೆಯಾಗುವಂತೆ ಅನ್ಯ ಕೋಮಿನ ಯುವಕ ಕಿರುಕುಳ ಕೊಟ್ಟಿದ್ದಾನೆ. ಪ್ರಕರಣದ ಸಮಗ್ರ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಬಜರಂಗ ದಳದ ಮುಖಂಡ ಶಿವಾನಂದ ಸತ್ತಿಗೇರಿ ಆಗ್ರಹಿಸಿದ್ದಾರೆ.

ಹಲ್ಲೆ ನಡೆಸಿದ್ದರ ಬಗ್ಗೆ ತನಿಖೆ: ವಿಷಯ ತಿಳಿದು ಕೆಎಂಸಿಆರ್‌ಐಗೆ ಆಗಮಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಯುವತಿಯ ಆರೋಗ್ಯ ವಿಚಾರಿಸಿದರು. ನಂತರ ಯುವತಿಯ ಪಾಲಕರೊಂದಿಗೆ ಚರ್ಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಮಾತ್ರೆ ಸೇವಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯ ಖಾಸಗಿ ಪೋಟೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದ. ಆರೋಪಿ ಸಿರಾಜ್‌ನನ್ನು ವಶಕ್ಕೆ ಪಡೆದಿದ್ದೇವೆ. ಯುವತಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದರ ಬಗ್ಗೆ ಮಾಹಿತಿ ಸಿಕ್ಕಿದೆ. ಅದೇ ಕಾರಣಕ್ಕೆ ಯುವತಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಯುವತಿ ಕುಟುಂಬದವರು ದೂರು ಕೊಟ್ಟಿದ್ದಾರೆ. ಯುವಕ-ಯುವತಿ ಮೂಲತಃ ಕುಂದಗೋಳ ಪಟ್ಟಣದವರು. ಇಬ್ಬರ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದೇವೆ. ಇಬ್ಬರ ನಡುವೆ ಯಾವ ರೀತಿಯ ಸಂಭಾಷಣೆ ನಡೆದಿತ್ತು ಹಾಗೂ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net