ಏ.10ರವರೆಗೆ ಕಾಲುವೆಗೆ ನೀರು ಹರಿಸಿ - ಮಾಜಿ ಶಾಸಕ ಸೋಮಲಿಂಗಪ್ಪ ನೇತೃತ್ವದಲ್ಲಿ ರೈತರ ಪ್ರತಿಭಟನೆ

sgp=1
ಸಿರಗುಪ್ಪದ ತಾಲೂಕು ಕಚೇರಿ ಮುಂದೆ ಬಿಜೆಪಿ ಮಂಡಲ ಘಟಕದಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿದರು. ಮಂಡಲ ಅಧ್ಯಕ್ಷ ಕೆ.ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ವೀರಭದ್ರಗೌಡ, ಚಿರಂಜೀವಿ ರೆಡ್ಡಿ, ಬಿ.ಈರಣ್ಣ, ಮೇಕಲ್ ವೀರೇಶ, ಎಚ್.ಬಿ.ಈರಣ್ಣ, ನೀಲಕಂಠ, ಮಹಾದೇವ, ಗುರುಸಿದ್ದಪ್ಪ, ನಾಗೇಶ್, ಮುದಿಯಪ್ಪ, ಬಸವರಾಜ, ಹನುಮಂತಪ್ಪ, ಕಾಡಸಿದ್ದಪ್ಪ ಇದ್ದರು.
Published on

ಸಿರಗುಪ್ಪ: ಜೋಳ ಖರೀದಿ ಕೇಂದ್ರದ ಅವ್ಯವಸ್ಥೆ ಸರಿಪಡಿಸುವುದು, ಏ.10ರ ವರೆಗೆ ಎಲ್.ಎಲ್ ಕಾಲುವೆ ಹಾಗೂ ವೇದಾವತಿ ನದಿಗೆ ನೀರು ಹರಿಸುವುದು ಸೇರಿದಂತೆ ರೈತರಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಮುಂದೆ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ನೇತೃತ್ವದಲ್ಲಿ ಬಿಜೆಪಿ ತಾಲೂಕು ಘಟಕದಿಂದ ಗುರುವಾರ ಧರಣಿ ನಡೆಸಿ, ತಹಸೀಲ್ದಾರ್ ಎಚ್.ವಿಶ್ವನಾಥಗೆ ಮನವಿ ಸಲ್ಲಿಸಲಾಯಿತು.

ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, ರೈತರು ವೇದಾವತಿ ನದಿಯ ನೀರನ್ನು ನಂಬಿ ಸಾವಿರಾರು ಎಕರೆ ಜಮೀನಿನಲ್ಲಿ ಭತ್ತ ಮತ್ತು ಇತರ ಬೆಳೆಗಳನ್ನು ಬೆಳೆದಿದ್ದಾರೆ. ಈಗಾಗಲೇ ಬೆಳೆ ಕಾಳುಕಟ್ಟುವ ಹಂತದಲ್ಲಿರುವುದರಿಂದ ನೀರಿನ ಅಗತ್ಯವಿದೆ. ನದಿಯಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಕಾಲುವೆ ಮೂಲಕ ನದಿಗೆ ಮತ್ತು ಎಲ್.ಎಲ್ ಕಾಲುವೆಗೆ ಏ.10ರ ವರೆಗೆ ನೀರು ಹರಿಸುವಂತೆ ಆಗ್ರಹಿಸಿದರು.

ಸಿರಗುಪ್ಪ ಎ.ಪಿ.ಎಂ.ಸಿ., ಕರೂರು ಹಾಗೂ ಹಚ್ಚೊಳ್ಳಿ ಜೋಳ ಖರೀದಿ ಕೇಂದ್ರಗಳು ಅವ್ಯವಸ್ಥೆಗಳಿಂದ ಕೂಡಿದ್ದು, ಶೀಘ್ರದಲ್ಲಿ ಸರಿಪಡಿಸಬೇಕು. ಒಂದು ದಿನಕ್ಕೆ 40 ರಿಂದ 50 ರೈತರ ಜೋಳ ಖರೀದಿಸುವಂತಾಗಬೇಕು, ಎ.ಪಿ.ಎಂ.ಸಿ. ಮುಂಭಾಗದ ವೇಬ್ರಿಡ್ಜ್ ರಿಪೇರಿ ಮಾಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮಧ್ಯವರ್ತಿಗಳ ಹಾವಳಿ ತಡೆದು, ಸರ್ಕಾರದ ಬೆಲೆಗೆ ಖರೀದಿಸುವಂತಾಗಬೇಕು . ರೈತರಿಗೆ ಕರಪತ್ರ ಮತ್ತು ಜಾಹೀರಾತುಗಳ ಮೂಲಕ ಮಾಹಿತಿ ಮುಟ್ಟಿಸಬೇಕು. ಇಲ್ಲದಿದ್ದರೆ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವವರೆಗೂ ನಮ್ಮ ಪಕ್ಷ ಸತತ ಹೋರಾಟವನ್ನು ಹಮ್ಮಿಕೊಳ್ಳುತ್ತದೆ ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net