

ಸಿರಗುಪ್ಪ: ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಳ್ಳಬೇಕು ಎಂದು ಶ್ರೀಮತಿ ಹೊನ್ನೂರಮ್ಮ ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಮೋಕಾ ಹೇಳಿದರು.
ತೆಕ್ಕಲಕೋಟೆ ಪಟ್ಟಣದ ದೇವಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎನ್ನೆಸ್ಸೆಸ್ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ಎನ್ನೆಸ್ಸೆಸ್ ವಿಶೇಷ ಶಿಬಿರದಲ್ಲಿ ಭಾಗವಹಿಸುವುದರಿಂದ ಶಿಸ್ತು, ಸಮಯ ಪ್ರಜ್ಞೆ ಹಾಗೂ ಪರಿಸರ ಕಾಳಜಿ ಬೆಳೆಯುತ್ತದೆ.
ಹೀಗಾಗಿ ವಿದ್ಯಾರ್ಥಿಗಳು ಎನ್ನೆಸ್ಸೆಸ್ ಘಟಕ ಸೇರಿಕೊಳ್ಳಬೇಕು. ಸುಂದರ ಪರಿಸರ ನಿರ್ಮಾಣಕ್ಕೆ ಪಣತೊಡಬೇಕು. ಮನೆ, ಶಾಲೆ ಹಾಗೂ ಕಾಲೇಜುಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗಿಡ, ಮರಗಳನ್ನು ಬೆಳೆಸಬೇಕು ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಎ.ನಾರಾಯಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಗುರಿ ಸಾಧನೆಗೆ ನಿರಂತರ ಶ್ರಮಿಸಬೇಕು ಎಂದು ಹೇಳಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಹೇಶ್ವರಿ ಹಾಗೂ ಕಾಲೇಜಿನ ಎನ್ನೆಸ್ಸೆಸ್-ಬಿ ಘಟಕದ ಶಿಬಿರಾಧಿಕಾರಿ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಎನ್ನೆಸ್ಸೆಸ್-ಎ ಘಟಕದ ಶಿಬಿರಾಧಿಕಾರಿ ಎ.ಎಸ್.ಬಸವರಾಜ, ಉಪನ್ಯಾಸಕರಾದ ಸವಿತಾ, ಸರಸ್ವತಿ, ರಾಮಾಂಜನೇಯ, ಡಾ.ರಾಜಣ್ಣ, ಡಾ.ಶಿವಣ್ಣ, ಕುಮಾರಸ್ವಾಮಿ, ಸುಬಾನ್, ಎಚ್.ವೀರೇಶ, ಬಸನಗೌಡ ಇತರರಿದ್ದರು.