

ಸಿರಗುಪ್ಪ: ವೇದ ಅಧ್ಯಯನ ಮತ್ತು ಸದಾ ಶಿವನ ಧ್ಯಾನ ಮಾಡುವ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದು. ವೇದಗಳ ಸಾರವೇ ಪಂಚಾಕ್ಷರಿ ಮಂತ್ರ ಎಂದು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.
ಪಟ್ಟಣದ ಅಮೃತೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ದೇವಸ್ಥಾನ ಟ್ರಸ್ಟ್‌ನಿಂದ 20ನೇ ವರ್ಷದ ಮಹಾಶಿವರಾತ್ರಿ ಉತ್ಸವ ಅಂಗವಾಗಿ ಬುಧವಾರ ಆಯೋಜಿಸಿದ್ದ ಶಿವ ವಚನಾಮೃತ ಹಾಗೂ ಸತ್ಯಾವತಾರ, ಸ್ವರಸಂಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವನನ್ನು ಆಡಂಬರದ ಭಕ್ತಿಯಿಂದ ಒಲಿಸಿಕೊಳ್ಳಲು ಸಾಧ್ಯವಿಲ್ಲ. ಸರಳ, ಸಜ್ಜನಿಕೆ, ನಿಷ್ಠೆಯ ಭಕ್ತಿಯಿಂದ ಒಲಿಸಿಕೊಳ್ಳಲು ಸಾಧ್ಯ. ಶಿವನ ಮಹಿಮೆ ಕೃಷ್ಣನೇ ಬಲ್ಲ. ಹೆಚ್ಚೆಂದರೆ ಜಗನ್ಮಾತೆ ಪಾರ್ವತಿ ಬಲ್ಲಳು. ಶಿವ, ವಿಷ್ಣು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡವರು. ಅಲ್ಪ ಜ್ಞಾನಿಗಳು ಬೇರೇನೋ ಹೇಳುತ್ತಾರೆ. ಶಾಸ್ತ್ರಗಳು ಸತ್ಯವನ್ನು ಮಾತ್ರ ಹೇಳುತ್ತವೆ. ಶಿವಯಾ ವಿಷ್ಣು ರೂಪಯಾ, ಶಿವ ರೂಪಯಾ ವಿಷ್ಣುವೇ ಎಂದ ಅವರು, ಕಾಶಿಯಲ್ಲಿ ಸಾವನ್ನಪ್ಪಿದರೆ ಮುಕ್ತಿ ಸಿಗುತ್ತದೆ. ಭಾರತೀಯ ಚಿಂತನೆಗಳನ್ನು ನಂಬಬೇಕು. ಪುರಾಣಗಳಲ್ಲಿ ಕೆಲವೊಂದು ಉತ್ಪ್ರೇಕ್ಷೆಗಳಿರಬಹುದು ಆದರೆ, ಇದರಲ್ಲಿ ಸುಳ್ಳುಗಳಿಲ್ಲ ಎಂದರು.
ರಾಮಚಂದ್ರ ಹಡಪದ ತಂಡದಿಂದ ಸಂಗೀತ-ಗಾಯನ ಕಾರ್ಯಕ್ರಮ ನಡೆಯಿತು. ಮಕ್ಕಳು ಶಿವ ತಾಂಡವ ನೃತ್ಯ, ನೇಹ ರಂಗ ತಂಡದ ಕಲಾವಿದರು ಡೊಳ್ಳು ಕುಣಿತ ಪ್ರದರ್ಶಿಸಿದರು. ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ, ಶಾಸಕ ಬಿ.ಎಂ.ನಾಗರಾಜ, ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೌತಾಳ ಆರ್.ಸದಾಶಿವ, ವಿಶ್ವಜ್ಯೋತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಕೆ.ಬಸವಲಿಂಗಪ್ಪ, ರಂಗತೋರಣ ಕಾರ್ಯದರ್ಶಿ ಪ್ರಭುದೇವ್ ಕಪ್ಪಗಲ್, ಸಮಾಜ ಸೇವಕ ಟಿ.ಧರಪ್ಪ ನಾಯಕ, ಶಿಕ್ಷಕರಾದ ಪಿ.ದಿವಾಕರ ನಾರಾಯಣ, ವೆಂಕಟೇಶ, ಚೆನ್ನಪ್ಪ ಇದ್ದರು.