

ಸಿರಗುಪ್ಪ: ಕಳಪೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಿದರೆ ಅಂಗಡಿ ಪರವಾನಗಿ ರದ್ದುಗೊಳಿಸಬೇಕಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್, ಕೃಷಿ ಪರಿಕರಗಳ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಪರಿಕರಗಳ ಮಾರಾಟಗಾರರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮಾರಾಟಗಾರರು ತಮ್ಮ ಮಾರಾಟ ಕೇಂದ್ರಗಳ ನವೀಕರಣದೊಂದಿಗೆ ಕೇಂದ್ರಗಳಲ್ಲಿರುವ ಪರ್ಟಿಲೈಜರ್ಸ್ ಮತ್ತು ಬಿತ್ತನೆ ಬೀಜಗಳ ಮಾಹಿತಿ ನೀಡಿದರೆ ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಲು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದರು.
ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಮೇಲಿನ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಅಂಗಡಿಗಳ ಜಿಎಸ್‌ಟಿ ರಸೀದಿ ನೀಡದೆ ರೈತರಿಗೆ ಮಾರುತ್ತಿರುವ ಬಗ್ಗೆ ದೂರುಗಳು ಬಂದಿವೆ.
ಜಿಲ್ಲಾ ಮಟ್ಟದಿಂದ ಪರಿವೀಕ್ಷಣೆ ತಂಡ ಮತ್ತು ನಮ್ಮ ಕಚೇರಿಯಿಂದ ವೀಕ್ಷಣೆ ತಂಡಗಳು ವೀಕ್ಷಣೆಯಲ್ಲಿವೆ. ಆದ್ದರಿಂದ ಎಲ್ಲರೂ ಪ್ರಾಮಾಣಿಕವಾಗಿ ರೈತರಿಗೆ ಅಗತ್ಯ ಪರಿಕರಗಳನ್ನು ನೀಡಬೇಕು ಎಂದು ತಿಳಿಸಿದರು.
ತಾಂತ್ರಿಕ ವಿಭಾಗದ ಕೃಷಿ ಅಧಿಕಾರಿ ಗರ್ಜಪ್ಪ, ಕೃಷಿ ಅಧಿಕಾರಿಗಳಾದ ಪರಮೇಶ್ವರ, ಬಾಲಾಜಿ ನಾಯ್ಕ, ಕೃಷಿ ಪರಿಕರಗಳ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಎಚ್.ಕೆ. ನಾಗನಗೌಡ, ಉಪಾಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಕಂದಗಲ್ ವೀರಣ್ಣ, ಸದಸ್ಯರಾದ ಶರಣಗೌಡ, ತಿರುಮಲ, ಮಾದವಯ್ಯ, ಚಿನ್ನಿ, ಶಾಂತಮೂರ್ತಿ ಇದ್ದರು.