

ಸಿರಗುಪ್ಪ: ಸೀಮಾಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆ ತೆರಳುತ್ತಿರುವ ಬಳ್ಳಾರಿ ಜಿಲ್ಲೆಯ ಸಾವಿರಾರು ಭಕ್ತರಿಗೆ ತಾಲೂಕಿನ ಮಾಟಸೂಗೂರು ಗ್ರಾಮಸ್ಥರು ಮಲ್ಲಪ್ಪ ತಾತನ ಮಠದ ಬಳಿ ಶುಕ್ರವಾರ ಪ್ರಸಾದ ವ್ಯವಸ್ಥೆ ಮಾಡಿದ್ದರು.
ಶ್ರೀಶೈಲಕ್ಕೆ ಪ್ರತಿವರ್ಷ ಯುಗಾದಿಯ ಒಂದು ವಾರ ಮುಂಚೆಯೇ ಬಳ್ಳಾರಿ ಜಿಲ್ಲೆಯ ನಾನಾ ಗ್ರಾಮಗಳ ಸಾವಿರಾರು ಭಕ್ತರು ತಾಲೂಕಿನ ಗಡಿಗ್ರಾಮ ಮಾಟಸೂಗೂರು ಮೂಲಕ ಪಾದಯಾತ್ರೆ ತೆರಳುತ್ತಾರೆ. ಇವರಿಗಾಗಿ ಗ್ರಾಮಸ್ಥರು ಉಪ್ಪಿಟ್ಟು, ಕೇಸರಿಬಾತ್, ಮಿರ್ಚಿಯನ್ನು ಬೆಳಗಿನ ಉಪಹಾರವಾಗಿ, ಮಧ್ಯಾಹ್ನ ಹುಗ್ಗಿ, ಅನ್ನ, ಸಾರನ್ನು ಪಾದಯಾತ್ರಿಗಳಿಗೆ ಉಣಬಡಿಸಿದರು.
ಕುರುಗೋಡು ತಾಲೂಕಿನ ಬಾದನಹಟ್ಟಿ ಭಕ್ತರು ಭಜನೆ ಮಾಡುತ್ತಾ ಶ್ರೀ ಮಲ್ಲಿಕಾರ್ಜುನನ ಮೂರ್ತಿ ಇರುವ ಪಲ್ಲಕ್ಕಿ ಹೊತ್ತುಕೊಂಡು ಅನೇಕ ವರ್ಷಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುತ್ತಿರುವುದು ವಿಶೇಷವಾಗಿದೆ. ಈ ಕುರಿತು ಬಾದನಹಟ್ಟಿ ಗ್ರಾಮಸ್ಥ ಮಲ್ಲಿಕಾರ್ಜುನ ಮಾತನಾಡಿ, ಪಲ್ಲಕ್ಕಿಯಲ್ಲಿ ಮಲ್ಲಿಕಾರ್ಜುನ ಉತ್ಸವ ಮೂರ್ತಿ ಇಟ್ಟುಕೊಂಡು ಶ್ರೀಶೈಲಕ್ಕೆ ತಲುಪುತ್ತೇವೆ. ಈ ಪದ್ಧತಿ ಅನೇಕ ವರ್ಷಗಳಿಂದ ಗ್ರಾಮಸ್ಥರು ನಡೆಸಿಕೊಂಡು ಬಂದಿದ್ದು, ನಾವು ಪಾಲಿಸಿಕೊಂಡು ಹೋಗುತ್ತಿದ್ದೇವೆ ಎಂದರು.