

ಸಿರಗುಪ್ಪ: ತಾಲೂಕಿನ ನಿಟ್ಟೂರು ಗ್ರಾಮದ ಹತ್ತಿರ ಇರುವ ಜೋಗಾವತಿ ಹಳ್ಳದ ತಾತ್ಕಾಲಿಕ ಸೇತುವೆ ಶುಕ್ರವಾರ ಮಳೆ ನೀರಿಗೆ ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತವಾಗಿದೆ.
ವಿವಿಧ ಗ್ರಾಮಗಳಿಂದ ಕಂಪ್ಲಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಶುಕ್ರವಾರ ಸೇತುವೆ ಮೇಲೆ ಸಾರ್ವಜನಿಕರು ಓಡಾಡುವ ವೇಳೆಯೇ ಕುಸಿದಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ. ನಿಟ್ಟೂರು ಸಮೀಪ ಹರಿಯುವ ಜೋಗಾವತಿ ಹಳ್ಳದ ನೆಲಮಟ್ಟದ ಸೇತುವೆ ಕೆಡವಿ ಹೊಸ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ಜನರ ಸಂಚಾರಕ್ಕಾಗಿ ತಾತ್ಕಾಲಿಕ ಮಣ್ಣಿನ ಸೇತುವೆ ನಿರ್ಮಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಮತ್ತು ಶುಕ್ರವಾರ ಸುರಿದ ಮಳೆಯ ನೀರು ಹಳ್ಳಕ್ಕೆ ಹರಿದು ಬಂದಿದ್ದರಿಂದ ತಾತ್ಕಾಲಿಕ ಸೇತುವೆ ಕುಸಿದಿದೆ. ಇದರಿಂದ ಸಿರಗುಪ್ಪ ನಗರ, ಕಂಪ್ಲಿ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳುವ ಸಾರ್ವಜನಿಕರು ತೆಕ್ಕಲಕೋಟೆ ಮತ್ತು ಹಳೇಕೋಟೆ ಮಾರ್ಗವಾಗಿ ಸಂಚರಿಸುವಂತಾಗಿದೆ.