

ಪಪಂ ವಿಶೇಷ ಸಾಮಾನ್ಯ ಸಭೆ
ಸಿರಗುಪ್ಪ: ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ತಿಳಿದು ಕೆಲಸಮಾಡಿದರೆ
ಪಟ್ಟಣ ಅಭಿವೃದ್ಧಿ ಹೊಂದುತ್ತದೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.
ತೆಕ್ಕಲಕೋಟೆಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಎಂ.ಕೆ.ರುದ್ರಮ್ಮಕೊಮಾರೆಪ್ಪ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಶನಿವಾರ ಮಾತನಾಡಿದರು. ಕೇವಲ ಸರ್ಕಾರದಿಂದ ಬಂದ ಅನುದಾನದಲ್ಲಿ ಅಭಿವೃದ್ಧಿಯಾಗಬೇಕೆಂದರೆ ಹೇಗೆ? ತೆರಿಗೆ ವಸೂಲಿಯೂ ಸರಿಯಾಗಿ ಆಗುತ್ತಿಲ್ಲ. ಸರ್ಕಾರದ ಅನುದಾನ ಮತ್ತು ತೆರಿಗೆ ಹಣದಿಂದ ಮಾತ್ರ ಸಾರ್ವಜನಿಕರಿಗೆ ಬೇಕಾದ ಮೂಲ ಸೌಲಭ್ಯ ಒದಗಿಸಲು ಸಾಧ್ಯ. ತೆರಿಗೆ ಸಂಗ್ರಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ.ಜಾ, ಪ.ಪಂಗಡ ಹಾಗೂ ಸಾಮಾನ್ಯರಿಗಾಗಿ 450 ಮನೆಗಳಿಗೆ ಅನುಮೋದನೆ ದೊರೆತಿದ್ದು, ಈಗಾಗಲೇ ಅರ್ಹ ಫಲಾನುಭವಿಗಳ ಪಟ್ಟಿಯೂ ಇದೆ. ಅದರ ಆಧಾರದ ಮೇಲೆ ಅಧಿಕಾರಿಗಳು ಫೆ.28ರ ಒಳಗಾಗಿ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಅನುಮತಿ ಪತ್ರ ನೀಡಬೇಕೆಂದು ತಿಳಿಸಿದರು.
ಸಾರ್ವಜನಿಕರು ತೆರಿಗೆ ಕಟ್ಟಿ ಮ್ಯೂಟೇಷನ್ ಮಾಡಿಸಿಕೊಳ್ಳಲು ಬರುತ್ತಾರೆ. ಅಲ್ಲದೆ ಆಸ್ತಿ ನೋಂದಣಿಗೆ ಬೇಕಾದ ಫಾರ್ಮ್-3 ನೀಡುವಂತೆ ಕೇಳುತ್ತಾರೆ. ಆದರೆ, ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ ಅವರನ್ನು ಅಲೆಯುವಂತೆ ಮಾಡುತ್ತಾರೆ. ಇನ್ನೂ ತೆರಿಗೆ ಸಂಗ್ರಹ ಹೇಗೆ ಆಗುತ್ತದೆ. ಕಾಲ ಮಿತಿ ಅನುಸರಿಸಿ ಮ್ಯೂಟೇಷನ್ ಹಾಗೂ ಫಾರ್ಮ್-3 ನೀಡಿದರೆ ತೆರಿಗೆ ಸಂಗ್ರಹವಾಗುತ್ತದೆ. ಅಲ್ಲದೆ, ಪಕ್ಕದ ಮನೆಗೆ ಫಾರ್ಮ್-3 ನೀಡುತ್ತಾರೆ. ನಮಗೆ ನೀಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ನಮಗೆ ಮತ ನೀಡಿ ಸದಸ್ಯರನ್ನಾಗಿ ಮಾಡಿದ್ದಾರೆ. ಅವರಿಗೆ ನಾವು ಏನು ಉತ್ತರ ಕೊಡುವುದು ಎಂದು ರಾಘವೇಂದ್ರ ಬೇಸರ ವ್ಯಕ್ತ ಪಡಿಸಿದರು.
19ನೇ ವಾರ್ಡ್‌ನಲ್ಲಿ ನಿರ್ಮಿಸುತ್ತಿರುವ ಶುದ್ಧ ಕುಡಿವ ನೀರಿನ ಘಟಕ ಒಂದು ವರ್ಷವಾದರೂ ಪೂರ್ಣಗೊಳಿಸದೆ ಇರುವುದರಿಂದ ನೀರಿನ ತೊಂದರೆಯಾಗುತ್ತಿದೆ. ಗುತ್ತಿಗೆದಾರರಿಂದ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದೇ ರೀತಿಯಾಗಿ 12 ಮತ್ತು 5ನೇ ವಾರ್ಡ್‌ನಲ್ಲಿನ ಘಟಗಳು ಪೂರ್ಣಗೊಂಡಿಲ್ಲ ಎಂದು ಮಂಜುಳ ಆರೋಪಿಸಿದರು. ಜೆಇ ಅಸ್ಕಿಯಾ ಖಾನಂ ಮಾತನಾಡಿ, ಗುತ್ತಿಗೆದಾರರಿಗೆ ಈಗಾಗಲೆ ಶುದ್ಧ ಕುಡಿವ ನೀರಿನ ಘಟಕದ ಕಾಮಗಾರಿ ಪೂರ್ಣಗೊಳಿಸುವಂತೆ 4 ಅರ್ಜಿ ಸಲ್ಲಿಸಿದ್ದೇನೆ. ಪೂರ್ಣಗೊಳಿಸುವುದಾಗಿ ಭರವಸೆ ನೀಡುತ್ತಾರೆ. ಆದರೆ, ಪೂರ್ಣಗೊಳಿಸುತ್ತಿಲ್ಲ. ಆದ್ದರಿಂದ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆಂದು ಹೇಳಿದರು.
ಪಟ್ಟಣ ಸ್ವಚ್ಛಮಾಡಲು ಈಗಿರುವ ಸಿಬ್ಬಂದಿ ಸಾಲುತ್ತಿಲ್ಲ. ಇನ್ನೂ ಹೆಚ್ಚಿನ ಸಿಬ್ಬಂದಿ ಬೇಕು. ಅಲ್ಲದೆ ಕಸ ವಿಲೇವಾರಿ ವಾಹನಗಳಿದ್ದು, ಚಾಲಕರಿಲ್ಲದೆ ನಿಂತಲ್ಲೇ ನಿಂತಿವೆ. ಗುತ್ತಿಗೆ ಆಧಾರದ ಮೇಲಾದರೂ ಚಾಲಕರನ್ನು ನಿಯೋಜನೆಮಾಡಿಕೊಳ್ಳಬೇಕೆಂದು ವಿ.ದ್ಯಾವಣ್ಣ ಒತ್ತಾಯಿಸಿದರು.
ವಿದ್ಯುತ್ ದೀಪ, ಕುಡಿಯುವ ನೀರಿನ ಪೈಪ್‌ಲೈನ್, ಬೋರ್‌ವೆಲ್‌ಗಳ ಬೇಡಿಕೆಗಾಗಿ ವಿವಿಧ ವಾರ್ಡ್‌ಗಳ ಸದಸ್ಯರು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನಂತರ ಮುಖ್ಯಾಧಿಕಾರಿ ಈರಣ್ಣ ಮಾತನಾಡಿ, ನಮ್ಮಲ್ಲಿ 17ಲಕ್ಷ ರೂ. ಅನುದಾನವಿದೆ. ಅತ್ಯಾವಶ್ಯಕ ಇರುವ ವಾರ್ಡ್‌ಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು. ಉಪಾಧ್ಯಕ್ಷೆ ಎಂ.ದೊಡ್ಡರುದ್ರಮ್ಮ ಪಕ್ಕೀರಯ್ಯ, ಮುಖ್ಯಾಧಿಕಾರಿ ಈರಣ್ಣ ಹಾಗೂ ಸದಸ್ಯರು ಇದ್ದರು.