ಮದ್ಯ ಅಕ್ರಮ ಮಾರಾಟ ತಡೆಗೆ ಕ್ರಮವಹಿಸಿ

Police
ಸಿರಗುಪ್ಪ ಎ.ವಿ.ಎಸ್. ಸಭಾಂಗಣದಲ್ಲಿ ಆಯೋಜಸಿದ್ದ ಸಭೆಯಲ್ಲಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ವೆಂಕಟೇಶ್ ಮಾತನಾಡಿದರು.
Published on

ಸಿರಗುಪ್ಪ: ಎಸ್ಸಿ, ಎಸ್ಟಿ ಸಮುದಾಯಗಳಿಗೆ ಯಾವುದೇ ರೀತಿಯ ತೊಂದರೆಗಳಿದ್ದರೆ ಅವುಗಳನ್ನು ಸರಿಪಡಿಸಿ, ಅವರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಮುಖರ ಸಭೆ ಆಯೋಜಿಸಲಾಗಿದೆ ಎಂದು ಸಿರಗುಪ್ಪ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ವೆಂಕಟೇಶ್ ಹೇಳಿದರು.

ನಗರದ ಎ.ವಿ.ಎಸ್. ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸಿರಗುಪ್ಪ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷರ ಕಚೇರಿ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಸಿ, ಎಸ್ಟಿ ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಮುಖಂಡರು ತಮ್ಮ ಗ್ರಾಮಗಳ ಸಮಸ್ಯೆಗಳ ಬಗ್ಗೆ ಸಭೆಗೆ ತಿಳಿಸಿದರೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಇಬ್ರಾಂಪುರ ಗ್ರಾಮದ ಗಂಗಪ್ಪ ಮಾತನಾಡಿ, ನಗರ ಮತ್ತು ತಾಲೂಕಿನಾದ್ಯಂತ ಬಾರ್‌ಗಳಿದ್ದರೂ ವಿವಿಧ ವಾರ್ಡ್‌ನಲ್ಲಿ ಮತ್ತು ಕೇರಿಗಳಲ್ಲಿರುವ ಡಬ್ಬ ಅಂಗಡಿಗಳಲ್ಲಿ ಅಕ್ರಮವಾಗಿ ದಿನದ 24 ಗಂಟೆಗಳ ಕಾಲ ಮದ್ಯ ಮಾರಾಟ ಮಾಡಲಾಗುತ್ತಿದೆ. ಶ್ರಮಿಕರು ದುಡಿಯಲು ಹೋಗದೆ ಕುಡಿತದ ದಾಸರಾಗಿ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಎಲ್ಲೆಂದರೆ ಅಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟ ತಡೆಯುವಂತೆ ಒತ್ತಾಯಿಸಿದರು.

ರಾಂಬಾಬು, ಮಹದೇವ, ಲಕ್ಷ್ಮಣ ಭಂಡಾರಿ, ಎಚ್.ವಿ.ಈರಣ್ಣ ತಮ್ಮ ಭಾಗಗಳಲ್ಲಿನ ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ರಾಜೇಶ್ವರಿ, ಸಿಪಿಐಗಳಾದ ಯಶವಂತ ಬಿಸ್ನಳ್ಳಿ, ಸುಂದರೇಶ ಹೊಳೆಣ್ಣನವರ್, ಎಂ.ಉಮೇಶ್‌ಕುಮಾರ್, ನಿರಂಜನ್, ವಿವಿಧ ಗ್ರಾಮಗಳ ಪ್ರಮುಖರಾದ ಗಣೇಶ, ರಾಮಪ್ಪ, ಡಿ.ತಿಮ್ಮಯ್ಯ, ಶ್ರೀನಿವಾಸ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net