

ಸಿರಗುಪ್ಪ: ಮಾನಸಿಕ, ಭಾವನಾತ್ಮಕ ಯೋಗಕ್ಷೇಮಕ್ಕೆ ಸಂಬಂಧಗಳು ಅತಿ ಮುಖ್ಯ ಎಂದು ಮಹಾದೇವ ತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ ಹೇಳಿದರು.
ಕುಡುದರಹಾಳ ಗ್ರಾಮದ ತಾಯಮ್ಮ ದೇವಿ ಪುಣ್ಯಾಶ್ರಮದ ಎಲೆವಾಳು ಸಿದ್ದಯ್ಯಸ್ವಾಮಿ ಬಯಲು ರಂಗಮಂದಿರದಲ್ಲಿ ಹಂದ್ಯಾಳ ಮಹಾದೇವ ತಾತ ಕಲಾ ಸಂಘ ಹಾಗೂ ಸಿರಿಗೇರಿ ಧಾತ್ರಿ ರಂಗ ಸಂಸ್ಥೆಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಂಬಂಧಗಳು ನಾಟಕ ಹಬ್ಬದಲ್ಲಿ ಮಾತನಾಡಿ, ಸಂಬಂಧಗಳು ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗ ಎಂದರು.
ಕುಡುದರಹಾಳ ತಾಯಮ್ಮ ದೇವಿ ಪುಣ್ಯಾಶ್ರಮದ ಪೀಠಾಧ್ಯಕ್ಷ ಡಾ.ಶಿವಕುಮಾರ ತಾತ ಮಾತನಾಡಿ, ಸಂಬಂಧಗಳು ನಮ್ಮ ಸ್ವಯಂ ಅರಿವು ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದರು.
ಹಚ್ಚೊಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಎಚ್.ಕೆ.ಸಿದ್ದಯ್ಯ ಸ್ವಾಮಿ ಮಾತನಾಡಿ, ಡಾಕ್ಟರ್, ಇಂಜಿನಿಯರ್ ಆಗಬೇಕೆನ್ನುವ ಇಂದಿನ ಗ್ರಾಮೀಣ ಯುವಕರಲ್ಲಿ ಕಲೆ-ಸಂಸ್ಕೃತಿ ಅಳವಡಿಸಲು, ಉಳಿಸಿ-ಬೆಳೆಸಲು ಮಹಾದೇವ ತಾತ ಕಲಾ ಸಂಘವು ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಸಿರಿಗೇರಿ ಧಾತ್ರಿ ರಂಗ ಸಂಸ್ಥೆಯ ಕಲಾವಿದರು ಸಂಬಂಧಗಳು ನಾಟಕ ಪ್ರದರ್ಶಿಸಿದರು. ಕುಮಾರ ಪ್ರಸಾದ್ ಸಾಹಿತ್ಯ ಸಾಥ್ ನೀಡಿದರು. ಮುಖಂಡರಾದ ಬಿ.ವೆಂಕಟೇಶ, ಕೆ.ಪಿ.ಖಾಸಿಂ ಸಾಬ್, ಜ್ಞಾನರೆಡ್ಡಿ, ಪಾಲಾಕ್ಷಿ ಗೌಡ, ಎಚ್.ಎಸ್.ಬುಶಪ್ಪ ಸಾಹುಕಾರ, ಹುಸೇನಪ್ಪ, ಮುದುಕಪ್ಪ, ಬೀರಲಿಂಗಪ್ಪ, ಅಂಬರೀಶ್, ಜಿ.ಲಿಂಗಪ್ಪ ಇದ್ದರು.