

ಸಿರಗುಪ್ಪ ತಾಲೂಕು ಕಚೇರಿಯಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ ನಡೆಯಿತು. ಗ್ರೇಡ್ 2 ತಹಸೀಲ್ದಾರ್ ಸತ್ಯಮ್ಮ, ಅಧಿಕಾರಿಗಳಾದ ಸಿದ್ದಯ್ಯ, ಗಾದಿಲಿಂಗಪ್ಪ, ರಾಘವೇಂದ್ರ ವರ್ಮ, ಸುಜಾತಾ, ದೊಡ್ಡಬಸಪ್ಪ, ರಮೇಶ ಇತರರಿದ್ದರು.
ಸಿರಗುಪ್ಪ: ತಾಲೂಕಿನಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರೇಡ್ 2 ತಹಸೀಲ್ದಾರ್ ಸತ್ಯಮ್ಮ ತಿಳಿಸಿದರು.
ನಗರದ ತಹಸಿಲ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಾವುದೇ ಲೋಪಗಳಾಗದಂತೆ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಿದ್ದು, ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು. ಮೈದಾನ ಸ್ವಚ್ಛತೆ, ವೇದಿಕೆ ಸಿದ್ಧತೆ, ಆಮಂತ್ರಣ ಪತ್ರಿಕೆ ಮುದ್ರಣ, ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ ಸೇರಿ ಇತರ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಸೂಚಿಸಿದರು.
ಮಹಾತ್ಮಗಾಂಧಿ ವೃತ್ತದಿಂದ ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ ಆರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಸಾಗಿ ತಾಲೂಕು ಕ್ರೀಡಾಂಗಣ ತಲುಪಲಿದೆ. ಬೆಳಗ್ಗೆ 9 ಗಂಟೆಗೆ ಶಾಸಕ ಬಿ.ಎಂ.ನಾಗರಾಜ ಧ್ವಜಾರೋಹಣ ನೆರವೇರಿಸುವರು. ಇಬ್ಬರು ಕನ್ನಡ ಶಿಕ್ಷಕರು, ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಮೂವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಎಡಿ ಸಿದ್ದಯ್ಯ, ಬಿಸಿಎಂ ಇಲಾಖೆ ಅಧಿಕಾರಿ ಗಾದಿಲಿಂಗಪ್ಪ, ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ರಾಘವೇಂದ್ರ ವರ್ಮ, ತಾಪಂ ವ್ಯವಸ್ಥಾಪಕಿ ಸುಜಾತಾ, ಕೆಇಬಿ ಅಧಿಕಾರಿ ದೊಡ್ಡಬಸಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ ಇತರರಿದ್ದರು.