20 ಕ್ವಿಂಟಾಲ್ ಜೋಳ ಖರೀದಿಸಲಿ

srg-2
ಸಿರಗುಪ್ಪದ ಜೋಳ ಖರೀದಿ ಕೇಂದ್ರದ ಬಳಿ ರೈತರು ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಬಿ.ಎಂ.ನಾಗರಾಜ ಮಾತನಾಡಿದರು. ಮಾಜಿ ಶಾಸಕ ಎಂ.ಸೋಮಲಿಂಗಪ್ಪ, ಡಿವೈಎಸ್ಪಿ ವೆಂಕಟೇಶ್, ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಸಕೀನಾ, ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ, ರೈತರು ಇತರರಿದ್ದರು.
Published on

ಸಿರಗುಪ್ಪ: ತಾಲೂಕಿನಲ್ಲಿ 2046 ರೈತರು ಜೋಳ ಖರೀದಿಗೆ ಹೆಸರು ನೋಂದಾಯಿಸಿದ್ದು, ಇಲ್ಲಿವರೆಗೆ 1076 ರೈತರಿಂದ 74,269 ಕ್ವಿಂಟಾಲ್ ಜೋಳ ಖರೀದಿಸಲಾಗಿದೆ. ಆದರೆ, ಎಫ್‌ಐಡಿ ಮಾಡಿಸಿದ ರೈತರಿಂದ ಪ್ರತಿ ಎಕರೆಗೆ 20 ಕ್ವಿಂಟಾಲ್ ಜೋಳ ಖರೀದಿಸಬೇಕೆಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಒತ್ತಾಯಿಸಿದರು.

ಪಟ್ಟಣದ ಜೋಳ ಖರೀದಿ ಕೇಂದ್ರದಲ್ಲಿ ರೈತರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಂಗಳವಾರ ಮಾತನಾಡಿದರು. ಎಫ್‌ಐಡಿ ಮಾಡಿಸಿದ ರೈತರಿಂದ 78,193 ಕ್ವಿಂಟಾಲ್ ಜೋಳ ಖರೀದಿ ಮಾಡಬೇಕು.

ಆದರೆ, ಸರ್ಕಾರದ ಹೊಸ ಆದೇಶದ ಪ್ರಕಾರ 40 ರಿಂದ 45 ಸಾವಿರ ಕ್ವಿಂಟಾಲ್ ಜೋಳ ಖರೀದಿ ಮಾಡಲು ಮಾತ್ರ ಅವಕಾಶವಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜೋಳ ಖರೀದಿ ಪ್ರಕ್ರಿಯೆ ನಿಧಾನವಾಗಿದೆ ಎಂದು ದೂರಿದರು.

ಎಫ್‌ಐಡಿ ಮಾಡಿಸಿರುವ ರೈತರು ಮಾರಾಟಕ್ಕಾಗಿ ಜೋಳವನ್ನು ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಬಂದಿದ್ದಾರೆ. ಈಗ ಸರ್ಕಾರ ಹೊಸ ಆದೇಶ ಹೊರಡಿಸಿದ್ದು ಸರಿಯಲ್ಲ. ಖರೀದಿ ಕೇಂದ್ರಕ್ಕೆ ತಂದಿರುವ ಜೋಳವನ್ನು ಮನೆಗೆ ತೆಗೆದುಕೊಂಡು ಹೋಗುವುದು ಹೆಣವನ್ನು ತೆಗೆದುಕೊಂಡು ಹೋದಂತೆ.

ಆದ್ದರಿಂದ ಸರ್ಕಾರ ಹೊಸ ಆದೇಶವನ್ನು ರದ್ದುಪಡಿಸಿ ಎಕರೆಗೆ 20 ಕ್ವಿಂಟಾಲ್ ಖರೀದಿ ಮಾಡಬೇಕು. ಇಲ್ಲದಿದ್ದರೆ ರಸ್ತೆ ತಡೆದು ಹೋರಾಟ ಮಾಡುವುದು ಅನಿವಾರ್ಯವೆಂದರು.

ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಮಾತನಾಡಿ, ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಅಧಿಕಾರಿಗಳ ನಿರ್ಲಕ್ಷೃದಿಂದ ರೈತರು ಸಕಾಲಕ್ಕೆ ಜೋಳ ಮಾರಾಟ ಮಾಡಲು ಖರೀದಿ ಕೇಂದ್ರಕ್ಕೆ ತಂದಿದ್ದರೂ ಲಾಗಿನ್ ಓಪನ್ ಇಲ್ಲ, ರಜೆ ಬಂದಿವೆ ಎನ್ನುವ ನೆಪಗಳನ್ನು ಹೇಳಿದ್ದರಿಂದ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, 20 ಕ್ವಿಂಟಾಲ್ ಬದಲಿಗೆ 10 ಕ್ವಿಂಟಾಲ್ ಖರೀದಿಗೆ ಮುಂದಾಗಿದೆ. ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಎಂಎಲ್‌ಎ ಬಿ.ಎಂ.ನಾಗರಾಜ ಭೇಟಿ

ಶಾಸಕ ಬಿ.ಎಂ.ನಾಗರಾಜ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿ, ಬೆಂಬಲ ಬೆಲೆ ಯೋಜನೆಯಡಿ ಸದ್ಯ ರೈತರಿಂದ ಎಕರೆಗೆ 10 ಕ್ವಿಂಟಾಲ್ ಜೋಳ ಖರೀದಿ ಮಾಡಲು ಅವಕಾಶ ಇದೆ. 20 ಕ್ವಿಂಟಾಲ್ ಜೋಳ ಖರೀದಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕಾಗುತ್ತದೆ. ಸದ್ಯ ರೈತರು 10 ಕ್ವಿಂಟಾಲ್ ಜೋಳ ಮಾರಾಟ ಮಾಡಿ. ಇನ್ನುಳಿದ ಜೋಳದ ಮಾರಾಟದ ಬಗ್ಗೆ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಇಲಾಖೆ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net