ಸಿದ್ಧಾಂತ ಶಿಖಾಮಣಿಯಿಂದ ವ್ಯಕ್ತಿತ್ವ ವಿಕಸನ

srg-1
ಸಿರಗುಪ್ಪ ಶ್ರೀಶೈಲ ಪೀಠದ ಶ್ರೀ ಶಿವಶಕ್ತಿ ಸಾಂಸೃ ್ಕತಿಕ ಭವನದಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಪೂಜೆ ಮತ್ತು ಶ್ರೀ ಸಿದ್ಧಾಂತ ಶಿಖಾಮಣಿ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಶ್ರೀಶೈಲ ಜಗದ್ಗುರು ಚನ್ನ ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಡಾ.ಮಲಯ ಶಾಂತಮುನಿ ಸ್ವಾಮೀಜಿ, ಚನ್ನವೀರ ಸ್ವಾಮೀಜಿ, ಶಿವಯೋಗಿ ಸ್ವಾಮೀಜಿ ಇನ್ನಿತರರಿದ್ದರು.
Published on

ಸಿರಗುಪ್ಪ: ವ್ಯಕ್ತಿತ್ವ ವಿಕಸನಗೊಳಿಸುವ ಮತ್ತು ಆತ್ಮವನ್ನು ಉನ್ನತಗೊಳಿಸುವಂಥ ಸುಲಭ ಸಾಧನ ಮಾರ್ಗದ ತತ್ವ-ಸಿದ್ಧಾಂತಗಳನ್ನು ಸಿದ್ಧಾಂತ ಶಿಖಾಮಣಿ ಗ್ರಂಥ ತಿಳಿಸುತ್ತದೆ ಎಂದು ಶ್ರೀಶೈಲ ಜಗದ್ಗುರು ಚನ್ನ ಸಿದ್ಧರಾಮ ಪಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಪಟ್ಟಣದ ಶ್ರೀಶೈಲ ಪೀಠದ ಶ್ರೀ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಇಷ್ಟಲಿಂಗ ಪೂಜೆ ಮತ್ತು ಶ್ರೀ ಸಿದ್ಧಾಂತ ಶಿಖಾಮಣಿ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀ ಸಿದ್ಧಾಂತ ಶಿಖಾಮಣಿ ಮಾನವ ಜನಾಂಗಕ್ಕೆ ಉಪದೇಶ ಮಾಡಿರುವ ದಿವ್ಯಗ್ರಂಥ. ವ್ಯಕ್ತಿಗೆ ನೀರಿನ ದಾಹವಾದಾಗ ನೀರಿರುವ ಸ್ಥಳಕ್ಕೆ ಹೋಗಿ ಕುಡಿಯಬೇಕು. ಹಾಗೆಯೇ ಶಿಷ್ಯ ತನ್ನ ಜ್ಞಾನದ ಹಸಿವನ್ನು ಇಂಗಿಸಿಕೊಳ್ಳಬೇಕಾದರೆ ಗುರುವಿನ ಬಳಿ ಹೋಗಬೇಕು. ಆದರೆ, ಸಮಾಜವನ್ನು ತಿದ್ದಬೇಕೆನ್ನುವ ಅಪಾರ ಕಾಳಜಿ ಹೊಂದಿರುವ ಜಗದ್ಗುರು ರೇಣುಕಾ ಭಗವತ್ಪಾದರು ಯೋಗ್ಯ ಶಿಷ್ಯನಿಗಾಗಿ ಕಾಯದೇ, ಯೋಗ್ಯ ಶಿಷ್ಯ ಅಗಸ್ತ್ಯಮುನಿ ಇರುವಲ್ಲಿಗೆ ಹೋಗಿ ಉಪದೇಶ ಮಾಡಿರುವುದೇ ಸಿದ್ಧಾಂತ ಶಿಖಾಮಣಿಯಾಗಿದೆ ಎಂದರು.

ಸ್ಥೂಲನೋಟಕ್ಕೆ ಮಾತ್ರ ಜೀವಾತ್ಮ, ಪರಮಾತ್ಮ ಬೇರೆ-ಬೇರೆ. ಜೀವಾತ್ಮ ಬಂದಿರುವುದೇ ಪರಮಾತ್ಮನಿಂದ. ಕೊನೆಗೆ ಜೀವಾತ್ಮ ಸೇರುವುದೇ ಪರಮಾತ್ಮನಲ್ಲಿಗೆ. ಶಿವನಿಂದ ಬಂದಿರುವ ಜೀವ ಪುನಃ ಶಿವನಲ್ಲಿಗೆ ಸೇರಬೇಕಾದರೆ ಯಾವ ಮಾರ್ಗವನ್ನು ಅನುಸರಿಸಬೇಕೆಂಬುದನ್ನು ಮಾರ್ಮಿಕವಾಗಿ ಉಪದೇಶ ಮಾಡಿರುವ ಗ್ರಂಥ ಸಿದ್ಧಾಂತ ಶಿಖಾಮಣಿ. ಅಲ್ಲಿ ಹೇಳುವ ವಿಚಾರಗಳನ್ನು ನಾವು ಅಳವಡಿಸಿಕೊಳ್ಳುತ್ತಾ ಹೋದಾಗ ನಾವು ಶಿವನಲ್ಲಿಗೆ ಹೋಗದೇ ಇದ್ದರೂ, ಶಿವನೇ ನಮ್ಮ ಹತ್ತಿರ ಬಂದು ಕರೆದುಕೊಂಡು ಹೋಗುತ್ತಾನೆ ಎಂದು ತಿಳಿಸಿದರು.

ಪಾಲ್ತೂರು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ರೌಡುಕುಂದಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ, ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ, ಹಿರಿಯ ವಕೀಲ ಎಚ್.ಕೆ. ಮಲ್ಲಿಕಾರ್ಜುನ ಸ್ವಾಮಿ, ಅಕ್ಕಿ ಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ಬಸವರಾಜಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಿ .ಆರ್.ಚನ್ನಬಸವನಗೌಡ, ಗೋಪಾಲ್ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net