ನಿರಂತರ ಮಳೆಗೆ ಹೊಲಗದ್ದೆಗಳಲ್ಲಿ ನೀರು ನಿಂತು ಭತ್ತ, ಹತ್ತಿ ಬೆಳೆ ಹಾನಿ

171022 Siraguppa Tq Heavy Rain Effect
ಸಿರಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಮದ ಹತ್ತಿ ಹೊಲದಲ್ಲಿ ಬೆಳೆ ಸಮೀಕ್ಷೆ ನಡೆಸುತ್ತಿರುವ ಕೃಷಿ ಅಧಿಕಾರಿ. ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ಭತ್ತದ ಬೆಳೆ ಸಮೀಕ್ಷೆ ನಡೆಸುತ್ತಿರುವ ಗ್ರಾಮಲೆಕ್ಕಾಧಿಕಾರಿ. ತಾಲೂಕಿನ ರುದ್ರಪಾದ ಗ್ರಾಮದ ಶಂಕ್ರಮ್ಮ ಎನ್ನುವವರ ಮನೆ ಭಾಗಶಃ ಕುಸಿದಿರುವುದು.
Published on

ಸಿರಗುಪ್ಪ: ತಾಲೂಕಾದ್ಯಂತ ಸುರಿದ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೊಲಗದ್ದೆಗಳಲ್ಲಿ ನೀರು ನಿಂತು ಬೆಳೆ ಹಾಳಾಗುವ ಹಂತ ತಲುಪಿದ್ದು, ರೈತರನ್ನು ಕಂಗೆಡಿಸಿದೆ.

ತುಂಗಭದ್ರಾ ನದಿ ತೀರದಲ್ಲಿ ಈಗಾಗಲೆ ಕೊಯ್ಲು ಹಂತಕ್ಕೆ ಬಂದಿರುವ ಭತ್ತದ ಬೆಳೆಯು ನೆಲಕ್ಕೆ ಬಿದ್ದಿದ್ದು, ನಿರಂತರ ಮಳೆಯಿಂದಾಗಿ ಬೆಳೆ ಕಟಾವು ಮಾಡುವುದು ರೈತರಿಗೆ ಕಷ್ಟವಾಗಿದೆ. ಬೆಳೆ ನೆಲಕ್ಕೆ ಬಿದ್ದು, ಮೊಳಕೆ ಬರುತ್ತಿದ್ದು, ರೈತರು ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಾಗಿದೆ. ಅತಿ ಹೆಚ್ಚು ಮಳೆ ಮತ್ತು ವಾತಾವರಣದಲ್ಲಾದ ಬದಲಾವಣೆಯಿಂದಾಗಿ ಭತ್ತದ ಬೆಳೆಗೆ ರೋಗ ಮತ್ತು ಕೀಟಗಳ ಬಾಧೆ ಹೆಚ್ಚಾಗಿದ್ದು, ರೋಗಗಳ ನಿಯಂತ್ರಣಕ್ಕೆ ಬೆಳೆಗಳಿಗೆ ಔಷಧಗಳ ಸಿಂಪರಣೆಗೂ ಮಳೆ ಬಿಡುವು ನೀಡದೇ ಇರುವುದರಿಂದ ಬೆಳೆದ ಬೆಳೆಯೂ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ.

ತಾಲೂಕಿನಲ್ಲಿ ಅತಿ ಹೆಚ್ಚು ಹತ್ತಿ ಬೆಳೆ ಬೆಳೆಯುವ ಹಚ್ಚೊಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಹತ್ತಿ ಹೊಲಗಳಲ್ಲಿ ಮಳೆ ನೀರು ನಿಂತಿದೆ. ಇದರಿಂದಾಗಿ ಕೈಗೆ ಬಂದ ಹತ್ತಿಯನ್ನು ಬಿಡಿಸುವುದು ಸಾಧ್ಯವಾಗುತ್ತಿಲ್ಲ. ಹತ್ತಿ ಬೆಳೆಯು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದು, ಮಾರುಕಟ್ಟೆಯಲ್ಲಿ ಈ ಹತ್ತಿಗೆ ಬೆಲೆ ಕಡಿಮೆ. ಅಲ್ಲದೆ, ಬೆಳೆದು ನಿಂತಿರುವ ಹತ್ತಿ ಹೊಲಗಳಲ್ಲಿ ಮಳೆ ನೀರು ನಿಂತಿರುವುದರಿಂದ ಹತ್ತಿ ಬೆಳೆಯ ಬೇರುಗಳು ಕೊಳೆಯುತ್ತಿರುವುದು ರೈತರ ಚಿಂತೆಗೀಡು ಮಾಡಿದೆ.

ನಮ್ಮ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಭತ್ತದ ಬೆಳೆಯಲ್ಲಿ ರೋಗ ರುಜಿನಗಳ ಕಾಟ ಹೆಚ್ಚಾಗಿದೆ. ರೋಗ ನಿಯಂತ್ರಣಕ್ಕೆ ಔಷಧಿ ಸಿಂಪರಣೆ ಮಾಡಲು ಮಳೆ ಅಡ್ಡಿಯಾಗಿದ್ದು, ನಮ್ಮ ಭತ್ತದ ಗದ್ದೆಗಳಿಗೆ ರೋಗಗಳ ಭಾದೆ ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದಾಗಿ ಇಳುವರಿ ಕಡಿಮೆಯಾಗಿ ನಷ್ಟವಾಗುತ್ತದೆ ಎಂದು ಕರೂರು ಗ್ರಾಮದ ರೈತ ವೈ.ಕೃಷ್ಣಾರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

ವಾಡಿಕೆಗಿಂತ ಅಧಿಕ: ತಾಲೂಕಿನಲ್ಲಿ ಕಳೆದ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ 533.1ಮಿ.ಮೀಟರ್ ಮಳೆಯಾಗಬೇಕಿತ್ತು. ಆದರೆ, 644.3ಮಿ.ಮೀಟರ್ ಮಳೆಯಾಗಿದ್ದು, ವಾಡಿಕೆಗಿಂತ 117ಮಿ.ಮೀಟರ್ ಮಳೆ ಹೆಚ್ಚಾಗಿದೆ. ವಾಡಿಕೆಗಿಂತ ಅಧಿಕ ಮಳೆಯಾಗಿರುವುದರಿಂದ 445.46 ಹೆಕ್ಟೇರ್ ಭತ್ತ, 63.99 ಹೆಕ್ಟೇರ್ ಹತ್ತಿ, 29 ಹೆಕ್ಟೇರ್ ಜೋಳ ಬೆಳೆ ನಷ್ಟವಾಗಿದೆ. ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಲು ಮಳೆಯೂ ಅಡ್ಡಿ ಇರುವುದರಿಂದಾಗಿ ಬೆಳೆ ನಷ್ಟ ಸಮಿಕ್ಷೆ ಕಾರ್ಯ ಮುಂದುವರಿದೆೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ತಿಳಿಸಿದ್ದಾರೆ.

ಭಾಗಶಃ ಕುಸಿತ 15 ಮನೆ: ಸಿರಗುಪ್ಪ ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ತಾಲೂಕಾದ್ಯಂತ 15ಮನೆಗಳು ಭಾಗಶಃ ಕುಸಿದಿವೆ.ರಾರಾವಿ 1, ಹಚ್ಚೊಳ್ಳಿ 1, ರುದ್ರಪಾದ 1, ನಿಟ್ಟೂರು 1, ತಾಳೂರು 1, ಉತ್ತನೂರು 1, ಕರೂರು 1, ದರೂರು 1, ಮುದ್ದಟನೂರು 1, ಸಿರಿಗೇರಿ 1, ತೆಕ್ಕಲಕೋಟೆ 4, ಶಾಲಿಗನೂರು 1, ಅಲಬನೂರು 1 ಗ್ರಾಮಗಳಲ್ಲಿ ಮನೆಗಳು ಭಾಗಶಃ ಕುಸಿದಿವೆ ಎಂದು ತಹಸೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net