ಗುಂಪು ಕಲಿಕೆಯಿಂದ ಒಳ್ಳೆಯ ಜ್ಞಾನ ಲಭಿಸುವುದು ಎಂದ ಜೆಎಂಎಫ್‌ಸಿ ನ್ಯಾಯಾಧೀಶ ಹಾಜಿಹುಸೇನಸಾಬ್ ಯಾದವಾಡ

290622 An open dialogue community meeting in Siruguppa
ಸಿರಗುಪ್ಪದಲ್ಲಿ ಬುಧವಾರ ಆಯೋಜಿಸಿದ್ದ ಮುಕ್ತ ಸಂವಾದ ಸಮುದಾಯ ಸಭೆಯನ್ನು ಜೆಎಂಎಫ್‌ಸಿ ನ್ಯಾಯಾಧೀಶ ಹಾಜಿಹುಸೇನಸಾಬ್ ಯಾದವಾಡ ಉದ್ಘಾಟಿಸಿದರು.
Published on

ಸಿರಗುಪ್ಪ: ಸಭ್ಯ ಸಮಾಜದಲ್ಲಿ ಯಾರೋ ಕಿಡಿಗೆಡಿಗಳು ಮಾಡಿದ ಜಾತೀಯತೆಯಿಂದಾಗಿ ಶಾಲೆಯಲ್ಲಿ ಅದನ್ನು ಅಳವಡಿಸಿಕೊಳ್ಳಬಾರದು. ನಾವೆಲ್ಲರೂ ಭಾರತೀಯರು, ಎಲ್ಲರೂ ಒಂದೇ ಮಾನವ ಜಾತಿಯವರು ಎಂಬ ಭಾವನೆ ಮೈಗೂಡಿಸಿಕೊಂಡು ಗುಂಪು ಕಲಿಕೆಯಿಂದ ಒಳ್ಳೆಯ ಜ್ಞಾನ ಪಡೆದುಕೊಳ್ಳಬೇಕು ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಹಾಜಿಹುಸೇನಸಾಬ್ ಯಾದವಾಡ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಸಭಾಂಗಣದಲ್ಲಿ ಮಕ್ಕಳ ಸಹಾಯವಾಣಿ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಮುಕ್ತ ಸಂವಾದ ಸಮುದಾಯ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಕರಿಂದ ಅಥವಾ ಇತರರಿಂದ ನೀವು ತೊಂದರೆಗೆ ಒಳಪಟ್ಟರೆ ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಬಂಧಿಸಿದ ಇಲಾಖೆಯ ಮೂಲಕ ತೊಂದರೆಯಿಂದ ಪಾರಾಗುವ ಮಾರ್ಗ ಕಂಡುಕೊಳ್ಳಬೇಕು. ಯಾವುದೇ ಮಕ್ಕಳಿಗೆ ನೆರವು ನೀಡಲು ಮಕ್ಕಳ ಸಹಾಯವಾಣಿ 1098 ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ. ಇನ್ನೂ ಬಸ್‌ನಲ್ಲಿ ಬರುವಾಗ ಮತ್ತು ಹೋಗುವಾಗ ತೊಂದರೆಯಾದಲ್ಲಿ ತಕ್ಷಣ ಪೊಲೀಸ್ ಇಲಾಖೆಯ 112ಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು. ಬಾಲಕಾರ್ಮಿಕ ಯೋಜನೆಯ ಜಿಲ್ಲಾ ನಿರ್ದೇಶಕ ಮೌನೇಶ ಮಾತನಾಡಿದರು.

ಮುಕ್ತ ಸಂವಾದದಲ್ಲಿ ವಿದ್ಯಾರ್ಥಿಗಳು ತಾಲೂಕಿನ ವಿವಿಧ ಗ್ರಾಮೀಣ ಭಾಗದಿಂದ ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ಬರದಿರುವುದು ಸೇರಿ ಇತರೆ ಸಮಸ್ಯೆಗಳನ್ನು ತಿಳಿಸಿದರು. ಸಂವಾದದಲ್ಲಿ ಕಂಡು ಬಂದ ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸರಿಪಡಿಸುವಂತೆ ನ್ಯಾಯಾಧೀಶರು ಸೂಚಿಸಿದರು.

ತಹಸೀಲ್ದಾರ್ ಎನ್.ಆರ್. ಮಂಜುನಾಥಸ್ವಾಮಿ, ಸಿಡಿಪಿಒ ಎ.ಕೆ.ಜಲಾಲಪ್ಪ, ಮುಖ್ಯಶಿಕ್ಷಕ ಜಿ.ವೆಂಕಟೇಶ, ಎಎಸ್‌ಐ ನಾರಾಯಣ ಸ್ವಾಮಿ, ಅಂಗನವಾಡಿ ಮೇಲ್ವಿಚಾರಕಿಯರಾದ ಮೈನಾವತಿ, ಭಾಗ್ಯಲಕ್ಷ್ಮಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಕಲಾವತಿ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net