

ಸಿರಗುಪ್ಪ: ಅಮೃತ ಮಹೋತ್ಸವ ಅಂಗವಾಗಿ ಯುವ ಬ್ರಿಗೇಡ್‌ನಿಂದ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಸ್ವಾತ್ಯಂತ್ರದಲ್ಲಿ ಕರ್ನಾಟಕದ ಪಾತ್ರ ಹಾಗೂ ಸಾಧನೆಗಳನ್ನು ದೃಶ್ಯ ಮಾಧ್ಯಮ ಕನ್ನಡತೇರಿನಲ್ಲಿ ಬಿತ್ತರಿಸಿ ತಿಳಿಸಲಾಗುವುದು ಎಂದು ಯುವ ಬ್ರಿಗೇಡ್ ಸಂಚಾಲಕ ಗುರುಪ್ರಸಾದ್ ಮಟ್ ಹೇಳಿದರು.
ನಗರದ ಚಾಗಿ ನರಸಯ್ಯ ನರಸಮ್ಮ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಕರ್ನಾಟಕದ ರಾಜ ಮನೆತನಗಳು, ವೀರವನಿತೆಯರು ಹಾಗೂ ಸೈನಿಕರು ತಮ್ಮ ಜೀವವನ್ನೇ ಮುಡುಪಾಗಿಟ್ಟ ಸಾಧನೆಗಳನ್ನು ಬಿತ್ತರಿಸುವ ಕನ್ನಡತೇರಿನ ರಥವನ್ನು ಸ್ವಾಗತಿಸಿ ಗುರುವಾರ ಮಾತನಾಡಿದರು.
ಕರ್ನಾಟಕದಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಸಿಡಿದೆದ್ದ ರಾಣಿ ಅಬ್ಬಕ್ಕದೇವಿ, ಭೈರದೇವಿ, ಕಿತ್ತೂರು ರಾಣಿಚನ್ನಮ್ಮ, ಕೆಳದಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪುರದ ವೆಂಕಟಪ್ಪ ನಾಯಕ, ನರಗುಂದದ ಬಾಬಾ ಸಾಹೇಬ, ದಂಡಿಯ ವಾಗ್, ಅವರ ಹೋರಾಟ ಹಾಗೂ ಸಾಮೂಹಿಕವಾಗಿ ಇಡೀ ಗ್ರಾಮಸ್ಥರೇ ಹೋರಾಡಿದ ಹಲಗಲಿ ಬೇಡರು, ಈಸೂರು ತರುಣರು ಆಂಗ್ಲರ ಆಡಳಿತ ವಿರೋಧಿಸುವುದಲ್ಲದೆ ಅವರ ಕಾನೂನನ್ನು ಮುರಿಯುವ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿಯಾಗಿದ್ದರು ಬಗ್ಗೆ ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವಂತೆ ದೃಶ್ಯಗಳನ್ನು ಬಿತ್ತರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಮೂಡಿಸಲಾಗುವುದು ಎಂದು ಹೇಳಿದರು. ಸರ್ಕಾರಿ ಬಾಲಕರ ಮತ್ತು ಬಾಲಕಿಯರ, ಶಾಂತಿನಿಕೇತನ, ವಿಜಯ ಮೇರಿ ಪ್ರೌಢಶಾಲೆಗಳಲ್ಲಿ ಪ್ರದರ್ಶನ ನಡೆಸಲಾಯಿತು.
ನಗರದ ಬಸವ ಮಠದ ಬಸವ ಭೂಷಣ ಸ್ವಾಮೀಜಿ, ಯುವಾ ಬ್ರಿಗೇಡ್ ಕಾರ್ಯಕರ್ತರಾದ ಫಣೀಂದ್ರ, ನಂದೀಶ್, ವೀರೇಶ್, ಪಂಪಾಪತಿ, ಸತೀಶ್, ರಾಜೇಶ್, ಮಲ್ಲಯ್ಯಶೆಟ್ಟಿ, ಶಾಂತಿ ಸ್ವಾಮಿ, ಪ್ರವೀಣ್, ಜಗದೀಶ್, ನಿರಂಜನ್ ಇತರರಿದ್ದರು.