

ಸಿರಗುಪ್ಪ: ತಹಸೀಲ್ದಾರ್ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮದಲ್ಲಿನ ಸಮಸ್ಯೆಗಳನ್ನು ಆಲಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರವನ್ನೂ ನೀಡುತ್ತಿದ್ದು, ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.
ತಾಲೂಕಿನ ಬಂಡ್ರಾಳ್ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಪರಿಹರಿಸಕೊಳ್ಳಲು ವಿವಿಧ ಕಚೇರಿಗಳಿಗೆ ಅರ್ಜಿ ತೆಗೆದುಕೊಂಡು ಓಡಾಡುವುದನ್ನು ತಪ್ಪಿಸುವುದು ಮತ್ತು ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದಿಂದ ನಿಮ್ಮ ಗ್ರಾಮದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ತಹಸೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿನ ಸರ್ಕಾರದ ಸೌಲಭ್ಯಗಳನ್ನು ಕಡುಬಡವರಿಗೆ ತಲುಪಿಸುವ ಕೆಲಸವಾಗುತ್ತಿದೆ. ಗ್ರಾಮದ ಪರಿಶೀಲನೆ ಸಂದರ್ಭ, ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಗ್ರಾಮಸ್ಥರು ದೂರು ನೀಡಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಕರೊನಾ ವೈರಸ್ ಸೇರಿದಂತೆ ವಿವಿಧ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಬಿತ್ತಿ ಪತ್ರಗಳ ವಿತರಿಸಿ ಜಾಗೃತಿ ಮೂಡಿಸಿದರು. ಜತೆಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ನಡೆಯಿತು. ಬಳಿಕ ಗ್ರಾಮದ ಮನೆ ಮನೆಗೆ ತೆರಳಿದ ತಹಸೀಲ್ದಾರ್‌ಗೆ ಕೆಲ ವೃದ್ಧ್ದರು ವೃದ್ದಾಪ್ಯ ವೇತನದಿಂದ ವಂಚಿತರಾಗಿದ್ದು ಕಂಡುಬಂತು. ತಕ್ಷಣವೇ ವೃದ್ದಾಪ್ಯ ವೇತನವನ್ನು ಮಂಜೂರು ಮಾಡಲು ಅಧಿಕಾರಿಗಳಿಗೆ ಆದೇಶಿಸಿದರು. ಒಟ್ಟು 80 ಅರ್ಜಿಗಳು ಬಂದಿದ್ದು, ಕೆಲವು ಅರ್ಜಿಗಳನ್ನು ಸ್ಥಳದಲ್ಲೇ ಇತ್ಯಾರ್ಥ ಪಡಿಸಿದರು.
ತಾಪಂ ಇಒ ಎಂ.ಬಸಪ್ಪ, ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ಉಪಾಧ್ಯಕ್ಷೆ ಆನಂದಮ್ಮ, ಸಹಾಯಕ ಕೃಷಿ ಅಧಿಕಾರಿ ನಜೀರ್ ಅಹ್ಮದ್, ಸಿಡಿಪಿಒ ಜಲಾಲಪ್ಪ, ಬಿಸಿಎಂ ಅಧಿಕಾರಿ ಎ.ಗಾದಿಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಸಿದ್ದಯ್ಯ, ಸಹಾಯಕ ಭೂಮಾಪನ ಅಧಿಕಾರಿ ನೂರುದ್ದೀನ್, ತಾಲೂಕು ವೈದ್ಯಾಧಿಕಾರಿ ಡಾ.ಈರಣ್ಣ, ಬಿಇಒ ಪಿಡಿ ಭಜಂತ್ರಿ, ಪಿಡಿಒ ಬಸವನಗೌಡ ಹಾಗೂ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.