ಸಿರಗುಪ್ಪದ ಎಚ್.ಹೊಸಳ್ಳಿ, ಹಾಗಲೂರಿನಲ್ಲಿ ಭತ್ತ ಕಟಾವಿಗೂ ಹಿನ್ನಡೆ

07042020 Siraguppa Pady
Published on

ಸಿರಗುಪ್ಪ: ತಾಲೂಕಿನ ಬಾಲಕನೊಬ್ಬನಿಗೆ ಕರೊನಾ ಸೋಂಕು ದೃಢಪಟ್ಟ ಪರಿಣಾಮ ಎಚ್.ಹೊಸಳ್ಳಿ ಮತ್ತು ಹಾಗಲೂರು ಗ್ರಾಮದಲ್ಲಿ ಅಂದಾಜು 9 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಕೊಯ್ಲಿಗೆ ಬಂದಿದ್ದರೂ ಕಟಾವು ಮಾಡದ ಸ್ಥಿತಿ ನಿರ್ಮಾಣವಾಗಿದೆ.

ಎರಡೂ ಗ್ರಾಮಗಳಿಗೆ ಹೊರಗಿನವರು ಊರೊಳಗೆ ಪ್ರವೇಶುವಂತಿಲ್ಲ. ಗ್ರಾಮಸ್ಥರು ಹೊರ ಹೋಗುವಂತಿಲ್ಲ ಎಂದು ನಿರ್ಬಂಧ ಹೇರಿದ್ದರಿಂದ ಭತ್ತ ಬೆಳೆದ ರೈತರು ಕಂಗಾಲಾಗಿದ್ದಾರೆ. ಸಾವಿರಾರು ರೂ. ವೆಚ್ಚ ಮಾಡಿ ಬೆಳೆದಿರುವ ಭತ್ತವನ್ನು ಸಮಯಕ್ಕೆ ಸರಿಯಾಗಿ ಕಟಾವು ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಆದರೆ, ನಿರ್ಬಂಧ ಹೇರಿದ್ದರಿಂದ ಭತ್ತ ಕಟಾವು ಮಾಡುವ ಯಂತ್ರ ಮತ್ತು ಒಬ್ಬ ರೈತನಿಗೆ ಮಾತ್ರ ಹೊಲಕ್ಕೆ ತೆರಳಲು ಅವಕಾಶ ನೀಡಲಾಗಿದೆ. ಭತ್ತ ಕಟಾವು ಮಾಡುವ ಯಂತ್ರದ ಮಾಲೀಕರಿಗೆ ಭತ್ತ ಕಟಾವು ಮಾಡಲು ತಾಲೂಕು ಆಡಳಿತದಿಂದ ಪಾಸ್ ವಿತರಣೆ ಮಾಡಲಾಗಿದ್ದು, ಅವರು ಮಾತ್ರ ಗ್ರಾಮಕ್ಕೆ ತೆರಳಬಹುದು. ಪಾಸ್ ಅವಧಿ ಕೇವಲ 12 ಗಂಟೆ ನಿಗದಿಪಡಿಸಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ..

ಹಾಗಲೂರು, ಹೊಸಳ್ಳಿ ಗ್ರಾಮದಲ್ಲಿ 9 ಸಾವಿರ ಎಕರೆಯಲ್ಲಿ ಬೆಳೆದ ಭತ್ತ ಕಟಾವು ಮಾಡಲು ಸರ್ಕಾರ ಪಾಸ್ ವಿತರಿಸುತ್ತಿದೆ. ಭತ್ತ ಕಟಾವು ಮಾಡಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಎರಡೂ ಗ್ರಾಮದ ರೈತರಿಗೆ ಪಾಸ್ ನೀಡಲು ಇಲಾಖೆಯ ಇಬ್ಬರು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net