ಯುವಕರು ಮಾದಕ ವ್ಯಸನಕ್ಕೆ ಬಲಿಯಾಗದಿರಿ

03 siraguppa 01
Published on

ಸಿರಗುಪ್ಪ: ಮಾದಕ ವ್ಯಸನಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸಿ ವ್ಯಸನ ಮುಕ್ತ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಿರಗುಪ್ಪದ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಡಿ. ಪವಿತ್ರಾ ಹೇಳಿದರು.

ನಗರದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನ ತಡೆಗಟ್ಟುವಿಕೆ, ಸಂತ್ರಸ್ತರಿಗೆ ಚಿಕಿತ್ಸೆ ಮತ್ತು ಪುನರ್ವಸತಿ ಮಾಹಿತಿ ಕಾರ್ಯಕ್ರದಲ್ಲಿ ಮಾತನಾಡಿದರು.

ಯುವ ಸಮೂಹ ಅತಿಯಾಗಿ ಮದ್ಯಪಾನ, ಧೂಮಪಾನ, ಗಾಂಜಾ, ಡ್ರಗ್ಸ್ ಬಳಸುವುದರಿಂದ ದಿನದಿಂದ ದಿನಕ್ಕೆ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಹಣ, ಆರೋಗ್ಯ ಹಾಗೂ ಗೌರವ ಹಾಳಾಗುತ್ತದೆ. ಕುಟುಂಬದ ಮೇಲೆ ಬೀರುವ ಪರಿಣಾಮವನ್ನು ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಕುಟುಂಬ ಅಥವಾ ಅಕ್ಕಪಕ್ಕದಲ್ಲಿ ಇರುವ ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಪುನರ್ವಸತಿ ಕಲ್ಪಿಸಬೇಕಾಗಿದೆ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ.ಈರಣ್ಣ, ನಗರ ಆರೋಗ್ಯ ಘಟಕದ ವೈದ್ಯ ನಾಗರಾಜ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ ಕುರಿತು ಮಾಹಿತಿ ನೀಡಿದರು. ಜೆಎಂಎಫ್‌ಸಿ ನ್ಯಾಯಾಧೀಶ ಹಾಜಿ ಹುಸೇನ್‌ಸಾಬ್ ಯಾದವಾಡ, ಸಹಾಯಕ ಸರ್ಕಾರಿ ಅಭಿಯೋಜಕಿ ಬಿ.ಎಲ್. ಶಾರದಾ, ವಕೀಲರ ಸಂಘದ ಅಧ್ಯಕ್ಷ ಎಸ್.ಮಂಜುನಾಥಗೌಡ, ಹಿರಿಯ ವಕೀಲರಾದ ಎನ್.ಅಬ್ದುಲ್‌ಸಾಬ್, ಮಲ್ಲಿಗೌಡ, ಪಿ.ಮಹದೇವಪ್ಪ, ಟಿ.ವೆಂಕಟೇಶನಾಯ್ಕ ಹಾಗೂ ನ್ಯಾಯಾಲಯ ಸಿಬ್ಬಂದಿ, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net