

ಸಿರಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಹತ್ತಿರದ ವೇದಾವತಿ ಹಗರಿ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಸ್ಥಳಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸೇತುವೆ ಕಾಮಗಾರಿ ಭರದಿಂದ ಸಾಗಿದ್ದು, ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಅತಿ ಶೀಘ್ರವಾಗಿ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಲಿದ್ದು, ಇಲ್ಲಿನ ಜನರ ಕನಸು ನನಸಾಗಲಿದೆ.
ಸಿಎಂ ಬಸವರಾಜ ಬೊಮ್ಮಾಯಿ ಆಗಸ್ಟ್ ಕೊನೆ ವಾರದಲ್ಲಿ ತಾಲೂಕಿಗೆ ಬರಲಿದ್ದು, ರಾರಾವಿ ಸೇತುವೆ, ನಗರದ ಕುಡಿಯುವ ನೀರಿನ ಕೆರೆ, ಬಲಕುಂದಿ-ಮುದೇನೂರು ಗ್ರಾಮಗಳ ಮಧ್ಯದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಇತರೆ ಪ್ರಮುಖ ಕಾರ್ಯಕ್ರಮಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದರಿಂದ ನಗರದ ಜನರ ಕುಡಿಯುವ ನೀರಿನ ಬರ ತಪ್ಪಲಿದ್ದು, ಮಳೆಗಾಲದಲ್ಲಿ ತೊಂದರೆ ಪಡುತ್ತಿದ್ದ ರಾರಾವಿ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.