

ಶಿರಾ : ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಶಿರಾ ನಗರಸಭೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗಿದ್ದು, ಅತೀ ಹೆಚ್ಚು ಸ್ಥಾನ ಹೊಂದಿದ್ದ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ. ಗುರುವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯ ಬಿ.ಅಂಜಿನಪ್ಪ ಅಧ್ಯಕ್ಷರಾಗಿ ಹಾಗೂ ಬಿಜೆಪಿಯ ಅಂಬುಜಾಕ್ಷಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಶಿರಾ ರಾಜಕೀಯ ಸಮೀಕರಣಕ್ಕೆ ಮುನ್ನುಡಿ ಬರೆದರು.
ನಗರಸಭೆಯಲ್ಲಿ ಅತೀ ಹೆಚ್ಚು 11 ಸದಸ್ಯರನ್ನು ಹೊಂದಿದ್ದರೂ ಅಧಿಕಾರ ಹಿಡಿಯಲು ವಿಫಲವಾಗಿದೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಾರ್ಯತಂತ್ರ ಸಂಪೂರ್ಣ ವಿಫಲವಾಗಿದ್ದು, ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾದಂತಾಗಿದೆ. 30 ಚುನಾಯಿತ ಸದಸ್ಯರಿರುವ ಶಿರಾ ನಗರಸಭೆಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ, ಸಂಸದ ಎ.ನಾರಾಯಣಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಡಾ.ಚಿದಾನಂದ ಎಂ.ಗೌಡ ಕೂಡ ಮತದಾನದ ಹಕ್ಕು ಪಡೆದಿದ್ದರಿಂದ 34 ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು.
ನಗರಸಭೆಯಲ್ಲಿ ಕಾಂಗ್ರೆಸ್-11, ಬಿಜೆಪಿ 4+3, ಜೆಡಿಎಸ್ 7+1 ಹಾಗೂ 8 ಪಕ್ಷೇತರ ಸದಸ್ಯರು ಮತದಾನದ ಹಕ್ಕು ಹೊಂದಿದ್ದರು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡ ಬಿಜೆಪಿ, ಕಾಂಗ್ರೆಸ್ ಅಧಿಕೇರದಂತೆ ತಡೆಯುವಲ್ಲಿ ಯಶಸ್ವಿಯಾಯಿತು.
ಅಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್‌ನ ಪಿ.ಪೂಜಾ ಹಾಗೂ ಜೆಡಿಎಸ್‌ನ ಅಂಜಿನಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಉಮಾ, ಅಂಬುಜಾಕ್ಷಿ ಹಾಗೂ ಸಮ್ರೀನ್‌ಖಾನ್ ಉಮೇದುವಾರಿಕೆ ಸಲ್ಲಿಸಿದ್ದರು. ಉಪಾಧ್ಯಕ್ಷೆ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಉಮಾ ನಾಮಪತ್ರ ವಾಪಸ್ ಪಡೆದಿದ್ದರಿಂದ ಕಣದಲ್ಲಿ ಅಂಬುಜಾಕ್ಷಿ ಹಾಗೂ ಸಮ್ರೀನ್‌ಖಾನ್ ಉಳಿದರು.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪೂಜಾ ಪರವಾಗಿ 16 ಸದಸ್ಯರು ಬೆಂಬಲ ಸೂಚಿಸಿದರು. ಜೆಡಿಎಸ್, ಬಿಜೆಪಿ ಬೆಂಬಲಿತ ಬಿ.ಅಂಜಿನಪ್ಪ ಪರವಾಗಿ 18 ಮತ ಚಲಾಯಿಸಿದ್ದರಿಂದ ನಿರಾಯಾಸವಾಗಿ ಗೆಲುವು ಪಡೆದರು.
ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅಂಬುಜಾಕ್ಷಿ ಪರ 18 ಸದಸ್ಯರು, ಕಾಂಗ್ರೆಸ್ ಅಭ್ಯರ್ಥಿ ಸಮ್ರೀನ್‌ಖಾನ್ ಪರ 16 ಮತ ಬಂದವು. ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಸುತ್ತಮುತ್ತ ಪೊಲೀಸ್ ಬಂದೂಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪರಸ್ಪರ ಬೈದಾಡಿಕೊಂಡ ಬಿಜೆಪಿ ಮುಖಂಡರು! : ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹಾಗೂ ಕೆಎಸ್‌ಐಸಿ ಅಧ್ಯಕ್ಷ ಎಸ್.ಆರ್.ಗೌಡ ಪರಸ್ಪರ ಏಕವಚನದಲ್ಲಿ ಕಿತ್ತಾಡಿಕೊಂಡಿದ್ದು ಬಿಜೆಪಿಯಲ್ಲಿರುವ ಒಳಜಗಳ ಬಯಲಾಗಿದೆ. ನಗರ ಹೊರವಲಯದ ಕ್ಲಬ್‌ನಲ್ಲಿ ಗುರುವಾರ ನಡೆದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಸಭೆಗೆ ಆಹ್ವಾನಿಸಿಲ್ಲ ಎಂದು ಎಸ್.ಆರ್.ಗೌಡ ಹಾಗೂ ಅವರ ಬೆಂಬಲಿಗರು ಪ್ರವಾಸಿ ಮಂದಿರದಲ್ಲಿ ಪರಸ್ಪರ ಕಿತ್ತಾಡಿಕೊಂಡರು. ಮುಖಂಡರ ಜಗಳವನ್ನು ನೋಡಿ ಕಂಗಾಲಾದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಇಬ್ಬರನ್ನೂ ಸಮಾಧಾನಿಸಿ ಕರೆದೊಯ್ದರು. ಒಟ್ಟಾರೆ ಘಟನೆ ಇಷ್ಟು ದಿನ ಬಿಜೆಪಿಯಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಮುಖಂಡರ ನಡುವಿನ ಒಳಜಗಳವನ್ನು ಬಹಿರಂಗಗೊಳಿಸಿದೆ.