

ಶಿರಾ : ಇಂದಿಗೂ ಟೆಂಟ್‌ನಲ್ಲೇ ಬದುಕುತ್ತಿರುವ, ಸರ್ಕಾರದ ಮೂಲಸೌಕರ್ಯಗಳು ಕೈಗೆಟುಕದ, ಚುನಾವಣೆ ವೇಳೆಯಲ್ಲಿ ಮಾತ್ರವೇ ಇಲ್ಲಿಗೆ ಭೇಟಿ ನೀಡುವ ಹಾಗೂ ಭೂಮಿ ಗುರುತಿಸಿದ್ದರೂ ನಿವೇಶನ ಹಂಚದ ಜನಪ್ರತಿನಿಧಿ, ತಾಲೂಕು ಆಡಳಿತವನ್ನು ದೂಷಿಸುತ್ತಲೇ ಬದುಕು ಸವೆಸುತ್ತಿದ್ದಾರೆ ಈ ಕಾಲನಿ ನಿವಾಸಿಗಳು.
ಶಿರಾ ನಗರಕ್ಕೆ ಹತ್ತಿರವೇ ಇರುವ ತಾವರೆಕೆರೆ 2ನೇ ಬೋವಿ ಕಾಲನಿಯ ಜನ ಇಂದಿಗೂ ವಿದ್ಯುತ್ ಇಲ್ಲದೆ ಬದುಕುತ್ತಿದ್ದಾರೆ. ಕಾಲನಿಯಲ್ಲಿ ಹಂದಿಜೋಗಿ ಹಾಗೂ ಭೋವಿ ಸಮುದಾಯದ 600ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಹಂದಿಜೋಗಿ ಸಮುದಾಯದ ಕುಟುಂಬಗಳು ಕನಿಷ್ಠ ಮೂಲಸೌಕರ್ಯದಿಂದ ವಂಚಿತವಾಗಿವೆ. ನಾಲ್ಕು ದಶಕಗಳಿಂದ ಸಮುದಾಯದ ಜನರು ಇಲ್ಲಿ ವಾಸವಾಗಿದ್ದಾರೆ. ನಿವೇಶನ ಹಾಗೂ ವಸತಿ ಯೋಜನೆಗಳಲ್ಲಿ ಅನುಕೂಲ ಮಾಡಿಕೊಡುವಂತೆ ಸಾಕಷ್ಟು ಮನವಿ ಮಾಡಿದ್ದರೂ ತಾವರೆಕೆರೆ ಗ್ರಾಪಂ ತಲೆಕೆಡಿಸಿಕೊಂಡಿಲ್ಲ.
ಅಲೆಮಾರಿ ಸಮುದಾಯ ಎಂಬ ಕಾರಣಕ್ಕೆ ಇತ್ತೀಚಿನ ದಿನದವರೆಗೂ ಈ ಸಮುದಾಯಕ್ಕೆ ಪಡಿತರಚೀಟಿ, ಆಧಾರ್‌ಕಾರ್ಡ್, ಮತದಾರರ ಚೀಟಿ ಯಾವುದನ್ನೂ ನೀಡದೆ ವಂಚಿಸಲಾಗಿತ್ತು. ಸತತ ಹೋರಾಟದ ಬಳಿಕ ಇತ್ತೀಚೆಗಷ್ಟೇ ಅವೆಲ್ಲವನ್ನೂ ಪಡೆದುಕೊಂಡಿದ್ದಾರೆ. ಗ್ರಾಮದಲ್ಲಿ ಹಂದಿಜೋಗಿ ಸಮುದಾಯದ 100, ಭೋವಿ ಸಮುದಾಯದ 40 ಕುಟುಂಬಗಳಿವೆ. ಅಂಗನವಾಡಿ, ಶಾಲೆಗಾಗಿ ಸಮೀಪದ ಗೊಲ್ಲರಹಟ್ಟಿ ಹೋಗಬೇಕಿದೆ. ಶುದ್ಧ ನೀರಿನ ಘಟಕ ಸ್ಥಾಪಿಸುವಂತೆ ಇಲ್ಲಿನ ಜನರು ಬಹುದಿನಗಳಿಂದಲೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆಯೂ ಅಧಿಕಾರಿಗಳ ತಾತ್ಸಾರ ಮುಂದುವರಿದಿದೆ.
ಹೋರಾಡಿದರೂ ಸಿಗದ ಸೂರು : ಇಲ್ಲಿನ ಬಡ ಕುಟುಂಬಗಳು ವಾಸಿಸುವ ಪ್ರದೇಶದಲ್ಲಿ ನಿವೇಶನ ನಿರ್ಮಿಸಿ ಕೊಡಬೇಕು ಎಂದು ಸಾಕಷ್ಟು ಹೋರಾಟ ನಡೆಸಿದ್ದಾರೆ. ತಾಲೂಕು ಕಚೇರಿವರೆಗೂ ಕಾಲ್ನಡಿಗೆ ಜಾಥಾ ಮಾಡಿ ಪ್ರತಿಭಟಿಸಿದ್ದರೂ ತಲೆ ಮೇಲೆ ಸೂರು ಇಂದಿಗೂ ಗಗನಕುಸುಮವಾಗಿದೆ. ತಾವರೆಕೆರೆ ಗ್ರಾಪಂ ವತಿಯಿಂದ ಈವರೆಗೂ ನಿವೇಶನ ಕೊಟ್ಟಿಲ್ಲ. ಇನ್ನು ಮನೆಯ ಮಾತಾದರೂ ಎಲ್ಲಿ? ಬಡಜನರು ಬಿಡಾರಗಳಲ್ಲಿ ವಾಸಿಸುವ ಈ ಜಾಗದ ಬಗ್ಗೆಯೇ ಸ್ಥಳೀಯ ದೇವಸ್ಥಾನ ಆಡಳಿತ ಮಂಡಳಿ ಜತೆ ತಕರಾರು ಇದ್ದು, ಅದು ಬಗೆಹರಿಯಬೇಕಿದೆ.
ವಿದ್ಯುತ್‌ದೀಪ, ರಸ್ತೆ, ಚರಂಡಿ ಸೇರಿ ಯಾವುದೇ ಮೂಲಸೌಕರ್ಯವಿಲ್ಲ. ವಿಷಜಂತುಗಳು, ಕಾಡುಪ್ರಾಣಿಗಳ ಭಯ ಸದಾ ಇದ್ದೇ ಇದೆ. ನಿವೇಶನಕ್ಕಾಗಿ 4 ಎಕರೆ ಭೂಮಿ ಗುರುತಿಸಲಾಗಿದೆ. ಅದನ್ನು ಶೀಘ್ರ ಅರ್ಹರಿಗೆ ಹಂಚಿಕೆ ಮಾಡಬೇಕು ಎಂಬುದು ಇವರೆಲ್ಲರ ಒತ್ತಾಯವಾಗಿದೆ.
ಅನರಕ್ಷರಸ್ಥರೇ ಹೆಚ್ಚು: ತಾವರೆಕೆರೆ 2ನೇ ಬೋವಿ ಕಾಲನಿಯಲ್ಲಿ ವಾಸಿಸುವ ಕುಟುಂಬಗಳಲ್ಲಿ ಪಿಯುಸಿ, ಪದವಿ ಕಾಲೇಜು ಮೆಟ್ಟಿಲು ತುಳಿದವರೇ ಇಲ್ಲ. ಪಕ್ಕದ ಗೊಲ್ಲರಹಟ್ಟಿಯಲ್ಲಿ ಮಕ್ಕಳಿಗೆ ಶಿಕ್ಷಣ ಸಿಗುತ್ತಿದೆ. ಅದೂ ಇತ್ತೀಚೆಗೆ ಆಗಿರುವ ವ್ಯವಸ್ಥೆ. ಅಕ್ಷರ ಜ್ಞಾನವಿಲ್ಲದ ಅಲೆಮಾರಿಗಳು ಸಣ್ಣ-ಪುಟ್ಟ ವ್ಯಾಪಾರದ ಮೂಲಕ ಜೀವನ ನಡೆಸುತ್ತಿದ್ದಾರೆ. ಯಾರೊಬ್ಬರಿಗೂ ಅಂಗೈ ಅಗಲ ಕೃಷಿ ಭೂಮಿ ಇಲ್ಲ. ಹಾಗಾಗಿ, ಕಡ್ಡಾಯ ಶಿಕ್ಷಣ ಕಾಯ್ದೆ ಮೂಲಕ ಇಲ್ಲಿನ ಮಕ್ಕಳಿಗೆ ಶಿಕ್ಷಣ ಲಭಿಸುವಂತೆ ಆಗಬೇಕಿದೆ.
ಕಾಲನಿಯಲ್ಲಿ ಮೂಲಸೌಕರ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುವ ಜನಪ್ರತಿನಿಧಿಗಳು ಮತ್ತೆ ಇತ್ತ ತಲೆ ಹಾಕುವುದಿಲ್ಲ. ಕರೆಂಟೂ ಇಲ್ಲ. ವಾಸಿಸಲು ಅಸಾಧ್ಯವಾದ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಸರ್ಕಾರಕ್ಕೆ ನಾವಿರುವುದಾದರೂ ಗೊತ್ತಿದೆಯೋ ಇಲ್ಲವೋ ಎಂಬುದೇ ಅನುಮಾನವಾಗಿದೆ. ಮಮತಾ, ಸ್ಥಳೀಯ ನಿವಾಸಿ ಹಂದಿಜೋಗಿ ಸಮುದಾಯ ಇಲ್ಲಿ 4 ದಶಕಕ್ಕೂ ಹೆಚ್ಚು ಕಾಲದಿಂದ ವಾಸವಾಗಿದೆ. ಸಮುದಾಯಕ್ಕೆ ಕನಿಷ್ಠ ಮೂಲಸೌಕರ್ಯವನ್ನೂ ಒದಗಿಸಿಕೊಟ್ಟಿಲ್ಲ. ಸರ್ಕಾರ ಕೂಡಲೇ ಇಲ್ಲಿನ ಜನಕ್ಕೆ ನಿವೇಶನ, ಮನೆ ಕೊಡಬೇಕು. ಶಿವಣ್ಣ, ಸ್ಥಳೀಯ ನಿವಾಸಿ ಟೆಂಟ್‌ನಲ್ಲಿ ವಾಸಿಸುತ್ತಿರುವ ಹಂದಿಜೋಗಿ ಸಮುದಾಯಕ್ಕೆ ನಿವೇಶನ ನೀಡಲು ಚೀರಲಹಳ್ಳಿಯಲ್ಲಿ 4 ಎಕರೆ ಭೂಮಿ ಗುರುತಿಸಲಾಗಿದೆ. ಆದರೂ ಅದನ್ನು ವಿತರಿಸಲು ತಾಲೂಕು ಆಡಳಿತ ಮನಸ್ಸು ಮಾಡುತ್ತಿಲ್ಲ. ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಶಾಸಕರಿಗೂ ಇಲ್ಲವಾಗಿದೆ. ಸತೀಶ್‌ಬಾಬು, ಗ್ರಾಪಂ ಮಾಜಿ ಸದಸ್ಯ