

ತುಮಕೂರು : ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಸಾಸಲು ಸತೀಶ್ ಶಿರಾ ನಗರದಲ್ಲಿಯೇ ಜನಸಂಪರ್ಕ ಕಚೇರಿ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ, ಕ್ಷೇತ್ರದಲ್ಲಿ ಸ್ಪರ್ಧೆ ಖಚಿತವೆಂಬ ಸಂದೇಶ ರವಾನಿಸಿದರು.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ವಿರುದ್ಧ ತೊಡೆತಟ್ಟಿರುವ ಡಾ.ಸಾಸಲು ಸತೀಶ್‌ಗೆ ಶಿರಾದಲ್ಲಿ ಅಪಾರ ಬೆಂಬಲ ವ್ಯಕ್ತವಾಗಿದ್ದು, ಟಿಕೆಟ್ ಯಾರ ಪಾಲಾಗುವುದು ಎಂಬ ಕುತೂಹಲ ಮೂಡಿಸಿದೆ.
ಸಮಾರಂಭದಲ್ಲಿ ಮಾಜಿ ಸಚಿವ ಸಂತೋಷ್‌ಲಾಡ್, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಜಿಪಂ ಮಾಜಿ ಅಧ್ಯಕ್ಷ ಜಿ.ರಘುನಾಥ್, ಕೆಂಚಮಾರಯ್ಯ ಸೇರಿ ಸಾಕಷ್ಟು ಮುಖಂಡರು ಭಾಗವಹಿಸಿ ಶುಭಕೋರಿದ್ದು, ಜಿಲ್ಲಾ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ತುಮಕೂರು, ಚಿತ್ರದುರ್ಗ ಜಿಲ್ಲೆಯ ಸಾಕಷ್ಟು ವಿಧಾನಸಭಾ ಕ್ಷೇತ್ರದಲ್ಲಿ ದಟ್ಟವಾಗಿರುವ ಕಾಡುಗೊಲ್ಲರ ಓಲೈಕೆಗಾಗಿ ಮುಂದಿನ ಚುನಾವಣೆಯಲ್ಲಿ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಚಿಂತಿಸಿದೆ ಎನ್ನಲಾಗಿದ್ದು, ಜಯಚಂದ್ರ ರಾಜಕೀಯ ನಡೆ ಕುತೂಹಲ ಹುಟ್ಟುಹಾಕಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಡಾ.ಸಾಸಲು ಸತೀಶ್ 2013ರಲ್ಲಿ ವಿಧಾನಸಭೆಗೂ ಸ್ಪರ್ಧಿಸಿದ್ದರು, 2018ರಲ್ಲಿ ಟಿಬಿಜೆ ಪುತ್ರ ಟಿ.ಜೆ.ಸಂತೋಷ್‌ಗಾಗಿ ಡಾ.ಸತೀಶ್‌ಗೆ ಟಿಕೆಟ್ ತಪ್ಪಿಸಿದ್ದು ಕಾಡುಗೊಲ್ಲ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.
ಕಾಂಗ್ರೆಸ್ ಮೇಲೆ ಮುನಿಸಿಕೊಂಡ ಕಾಡುಗೊಲ್ಲರ ಮತಕ್ಕಾಗಿ ಹಿರಿಯೂರು ಹಾಗೂ ಗುಬ್ಬಿಯಲ್ಲಿ ಯಾದವ ಸಮುದಾಯದವರಿಗೆ ಟಿಕೆಟ್ ಕೊಟ್ಟು ಲಾಭ ಪಡೆದಿದ್ದ ಬಿಜೆಪಿ, ಶಿರಾ ಉಪಚುನಾವಣೆಯಲ್ಲಿಯೂ ಇದೇ ಅಸ್ತ್ರಬಳಸಿ, ವಿಜಯ ಸಾಧಿಸಿತ್ತು.
ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಎನಿಸಿರುವ ಕಾಡುಗೊಲ್ಲರ ಮತ ಪಡೆಯಲು ಶಿರಾ ಅಥವಾ ಹಿರಿಯೂರಿನಿಂದ ಮುಂದಿನ ಚುನಾವಣೆಯಲ್ಲಿ ಅದೇ ಸಮುದಾಯಕ್ಕೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದ್ದು, ಇದರ ಭಾಗವಾಗಿಯೇ ಡಾ.ಸತೀಶ್ ಶಿರಾ ನಗರಸಭೆ ಚುನಾವಣೆಯಲ್ಲಿ ಸಂಪನ್ಮೂಲ ಹರಿಸಿದ್ದರು, ಈಗ ಕಚೇರಿ ನಿರ್ಮಾಣಕ್ಕೂ ಮುಂದಾಗಿದ್ದಾರೆ ಎನ್ನಲಾಗಿದೆ.
ಟಿ.ಬಿ.ಜಯಚಂದ್ರ ನಡೆಯೇನು? : ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಎನಿಸಿದ್ದ ಟಿ.ಬಿ.ಜಯಚಂದ್ರ ಅವರಿಗೆ ವಯಸ್ಸಿನ ಕಾರಣಕ್ಕೆ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಲಿದೆ ಎಂಬ ವದಂತಿ ಹರಡಿದೆ. ಚಿಕ್ಕನಾಯಕನಹಳ್ಳಿಯಿಂದ ಜಯಚಂದ್ರ ಸ್ಪರ್ಧಿಸುತ್ತಾರೆ ಎಂಬ ಮಾತೂ ಇದೆ. ಹಿರಿಯ ಮುಖಂಡ ಜಯಚಂದ್ರಗೆ ಟಿಕೆಟ್ ತಪ್ಪುವುದಿಲ್ಲ, ಜಿಲ್ಲಾ ಕಾರ್ಯಾಧ್ಯಕ್ಷರು ಕ್ಷೇತ್ರದಲ್ಲಿ ಓಡಾಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಎಂಬ ವಾದ ಟಿಬಿಜೆ ಬೆಂಬಲಿಗರದ್ದಾಗಿದೆ. ಭೂಮಿಪೂಜೆ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ನಸ್ರಲ್ಲಾಖಾನ್, ಎಸ್.ಎಲ್.ರಂಗನಾಥ್, ರವಿಕುಮಾರ್, ಜಾಂಕೊ, ಕೊಟ್ಟ ಗ್ರಾಪಂ ಅಧ್ಯಕ್ಷ ಶಿವಣ್ಣ, ಅಹಿಂದ ಮುಖಂಡ ಪ್ರಭುಬಡೀರಣ್ಣ, ಕೆಂಚಮಾರಯ್ಯ ಮತ್ತಿತರರ ಪ್ರಮುಖ ಮುಖಂಡರು ಭಾಗವಹಿಸಿದ್ದರು.
ಶಿರಾದಲ್ಲಿ ಅಹಿಂದ ವರ್ಗದ ಮತಗಳು ಹೆಚ್ಚಿರುವ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೂಡ ಕೇಳಿದ್ದೇನೆ, ಕ್ಷೇತ್ರದ ಜನರ ಸಂಪರ್ಕಕ್ಕೆಂದು ಕಚೇರಿ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ್ದೇನೆ, ಟಿಕೆಟ್ ವಿಷಯದಲ್ಲಿ ಅಂತಿಮವಾಗಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ, ನಾನು ಅದಕ್ಕೆ ಬದ್ಧನಾಗಿರುತ್ತೇನೆ. ಡಾ.ಸಾಸಲು ಸತೀಶ್ ಕಾರ್ಯಾಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಮಿತಿ