

ಶಿರಾ : ಕೊರೆಯುವ ಚಳಿಯಲ್ಲೂ ನಗರಸಭೆ ಚುನಾವಣೆ ಕಾವು ಬಿಸಿಯೇರಿಸಿದೆ. ಎಲ್ಲ 31 ವಾರ್ಡ್‌ಗಳಿಗೆ ಡಿ.27ರಂದು ಚುನಾವಣೆ ನಡೆಯುತ್ತಿದ್ದು, ಸ್ಥಳೀಯ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಕಾಂಗ್ರೆಸ್, ಜೆಡಿಎಸ್‌ಗೆ ಸಮಬಲವಾಗಿ ಬಿಜೆಪಿ ತೊಡೆತಟ್ಟಿ ನಿಂತಿದೆ. ಮುಸ್ಲಿಂ ಪ್ರಾಬಲ್ಯವಿರುವ ವಾರ್ಡ್‌ಗಳನ್ನು ಹೊರತುಪಡಿಸಿ 24 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ ಈ ಬಾರಿ ನಗರಸಭೆಯಲ್ಲಿ ‘ಕಿಂಗ್‌ಮೇಕರ್‘ ಆಗಲು ಹವಣಿಸುತ್ತಿದೆ.
2006ರಲ್ಲಿ ನಗರಸಭೆ ಅಸ್ತಿತ್ವಕ್ಕೆ ಬಂದ ಬಳಿಕ 2007ರಲ್ಲಿ ಮೊದಲ ಚುನಾವಣೆ ನಡೆದಿತ್ತು. ಜೆಡಿಎಸ್-11, ಕಾಂಗ್ರೆಸ್-10, ಬಿಜೆಪಿ ಒಂದು ಸ್ಥಾನ ಗೆದ್ದು ಖಾತೆ ತೆರೆದಿತ್ತು. ನಗರಸಭೆ ಅಧಿಕಾರ ಹಿಡಿಯಲು ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿರಲಿಲ್ಲ. ಅಂದು ಪಕ್ಷೇತರರು ನಿರ್ಣಾಯಕ ಪಾತ್ರವಹಿಸಿದ್ದು ಕಾಂಗ್ರೆಸ್ ಅಧಿಕಾರದ ಗದ್ದುಗೆಗೇರಿತ್ತು. ಇದಾದ ಬಳಿಕ 2013ರಲ್ಲಿ ನಗರಸಭೆಗೆ ಎರಡನೇ ಬಾರಿ ಚುನಾವಣೆ ನಡೆದಿದ್ದು, ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತಾದರೂ ಸ್ಪಷ್ಟಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಜೆಡಿಎಸ್-9, ಪಕ್ಷೇತರರ-5, ಬಿಜೆಪಿ-1, ಕೆಜೆಪಿ-1 ಸ್ಥಾನ ಗೆದ್ದಿದ್ದು ಮತ್ತೊಮ್ಮೆ ಪಕ್ಷೇತರರು ಕೈಹಿಡಿದರು. ಅಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ನಗರಸಭೆ ಮೇಲೆ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ಸರ್ಕಾರ ಆಡಳಿತದಲ್ಲಿದ್ದು ಸ್ಥಳೀಯವಾಗಿ ಶಾಸಕರು, ಎಂಎಲ್ಸಿ, ಸಂಸದರನ್ನು ಹೊಂದಿರುವ ಬಿಜೆಪಿ ನಗರಸಭೆಯಲ್ಲಿ ‘ಮಿಷನ್-21’ ಗುರಿಯಿಟ್ಟುಕೊಂಡಿದೆಯಾದರೂ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಅವರಲ್ಲಿ ಬೈಎಲೆಕ್ಷನ್‌ನಲ್ಲಿದ್ದ ಫೋರ್ಸ್ ಈಗ ಕಾಣೆಯಾಗಿರುವುದು ಪಕ್ಷ ನಿಷ್ಠ ಕಾರ್ಯಕರ್ತರಲ್ಲಿ ಉತ್ಸಾಹ ಕುಗ್ಗಿಸಿದೆ. ಎಂಎಲ್ಸಿ ಚಿದಾನಂದ ಎಂ ಗೌಡ ಚುನಾವಣೆಯಲ್ಲಿ ಶಕ್ತಿಮೀರಿ ದುಡಿಯುತ್ತಿದ್ದು, ಇವರಿಗೆ ಹೆಗಲುಕೊಟ್ಟು ನಿಗಮ ಮಂಡಳಿ ಅಧ್ಯಕ್ಷರಾದ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ ದುಡಿಯುತ್ತಿದ್ದಾರೆ. ಹಾಗಾಗಿ, ಪಕ್ಷ ಈ ಹಿಂದಿಗಿಂತ ಉತ್ತಮ ಸಾಧನೆ ಮಾಡುವ ಸಾಧ್ಯತೆ ಇದೆ. ಈ ಬಾರಿ ನಾವಿಕನಿಲ್ಲದ ಜೆಡಿಎಸ್‌ಗೆ ನಗರಸಭೆ ಅಧಿಕಾರ ಹಿಡಿಯುವ ಕನಸು ಕೈಗೂಡುವಂತೆ ಕಾಣುತ್ತಿಲ್ಲ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಸಾರಥ್ಯದಲ್ಲಿ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಲು ಶತಾಯಗತಾಯ ಹೋರಾಟ ನಡೆಸಿದೆ.
12 ವಾರ್ಡ್‌ಗಳಲ್ಲಿ ಮುಸ್ಲಿಂ ಮತದಾರರ ಪ್ರಾಬಲ್ಯವಿದ್ದು ಕಾಂಗ್ರೆಸ್ ಈ ಬಾರಿಯೂ ಹೆಚ್ಚು ಸ್ಥಾನ ಗೆಲ್ಲುವ ಸೂಚನೆಗಳು ಸ್ಪಷ್ಟವಾಗಿವೆ. ಆದರೆ, ಕೈ ಗೆಲುವಿನ ಓಟಕ್ಕೆ ಪಕ್ಷೇತರರ ತೊಡರುಗಾಲು ಆಗುವ ಸಾಧ್ಯತೆ ಇವೆ. ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷವು ಮೊದಲ ಬಾರಿ ಶಿರಾ ನಗರಸಭೆ ಪ್ರವೇಶಿಸಲು ಹೊರಟಿರುವುದು ಕಾಂಗ್ರೆಸ್ ಬಹುಮತ ಗಳಿಸುವ ಕನಸಿಗೆ ವಿಘ್ನವಾಗಲಿದೆ. ಆಮ್ ಆದ್ಮಿ ಪಕ್ಷವೂ 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಕುತೂಹಲ ಹೆಚ್ಚಿಸಿದೆ.
ನಾವಿಕನಿಲ್ಲದ ಜೆಡಿಎಸ್‌ಗೆ ಕಾರ್ಯಕರ್ತರೇ ಶಕ್ತಿ : ನಗರಸಭೆ ಚುನಾವಣೆಯನ್ನು ಸತ್ಯಣ್ಣ ಇಲ್ಲದೆ ಮೊದಲ ಬಾರಿ ಜೆಡಿಎಸ್ ಎದುರಿಸುತ್ತಿದ್ದು ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ ಎನಿಸಿದ್ದಾರೆ. ಹಾಗಾಗಿ, ಈ ಬಾರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ನಾಯಕರ ಕೊರತೆ ಇದೆ. ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಪಕ್ಷದ ಜವಾಬ್ದಾರಿ ಹೊತ್ತಿದ್ದು ವಿಧಾನಸಭೆ ಟಿಕೆಟ್ ಆಕಾಂಕ್ಷಿಗಳ್ಯಾರು ನಗರಸಭೆ ಚುನಾವಣೆಯಲ್ಲಿ ಬಂಡವಾಳ ಹೂಡಲು ಮುಂದೆ ಬಾರದೆ ಇರುವುದು ಪಕ್ಷ ಬಲಹೀನಗೊಳ್ಳುವಂತಾಗಿದೆ. ಪುತ್ರಿ ಮಂದಾರ ಅವರನ್ನು ಕಣಕ್ಕಿಳಿಸಿರುವ ತಾಲೂಕು ಅಧ್ಯಕ್ಷ ಆರ್.ಉಗ್ರೇಶ್ ಸೇರಿ ಹಲವು ಸ್ಥಳೀಯ ಮುಖಂಡರು ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಇನ್ನು ಸ್ವಂತ ಬಲದ ಮೇಲೆ ಗೆಲ್ಲುವ ಶಕ್ತಿಯುಳ್ಳವರು ಜೆಡಿಎಸ್ ನಿಂದ ಸ್ಪರ್ಧಿಸಿರುವರಾದರೂ ಅಧಿಕಾರ ಗದ್ದುಗೆಗೇರುವುದು ಕನಸಾಗಲಿದೆ.
ಬೈಎಲೆಕ್ಷನ್ ಕಿಚ್ಚು ಬಿಜೆಪಿಯಲ್ಲಿಲ್ಲ : ಶಾಸಕ ಬಿ.ಸತ್ಯನಾರಾಯಣ ನಿಧನದಿಂದಾಗಿ ತೆರವಾದ ಶಿರಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ 2020ರಲ್ಲಿ ಮೊದಲ ಬಾರಿ ಬಿಜೆಪಿ ಕಮಲ ಅರಳಿದ್ದು ಈ ಬಾರಿ ನಗರಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವಂಥ ವಾತಾವರಣ ಇದೆಯಾದರೂ ಕೇಸರಿ ಪಡೆಯಲ್ಲಿ ಆ ಕಿಚ್ಚು ಕಾಣುತ್ತಿಲ್ಲ. ಬಿಜೆಪಿಯು ಎಸ್.ಡಿ.ದಿಲೀಪ್ ಕುಮಾರ್‌ಗೆ ಪಕ್ಷದ ಪ್ರಚಾರ ಉಸ್ತುವಾರಿ ವಹಿಸಿದ್ದು ಹಗಲಿರುಳು ಕ್ಷೇತ್ರದಲ್ಲಿ ಸುತ್ತುತ್ತಿದ್ದಾರೆ.
ಕೈಗೆ ಜಯಚಂದ್ರ : ಮಾಜಿ ಸಚಿವ ಜಯಚಂದ್ರ ಸಾರಥ್ಯದಲ್ಲಿ ಕಾಂಗ್ರೆಸ್ ನಗರಸಭೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಹೋರಾಟ ನಡೆಸಿದೆ. ಖುದ್ದು ಅಭ್ಯರ್ಥಿಗಳ ಪರ ಜಯಣ್ಣ ವಾರ್ಡ್‌ಗಳಲ್ಲಿ ಸುತ್ತಿ ಪ್ರಚಾರ ನಡೆಸುತ್ತಿರುವುದು ಪ್ರತಿಯೊಂದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವುದಕ್ಕೆ ಸಾಕ್ಷಿಯೆನಿಸಿದೆ. ಈ ಬಾರಿ ನಗರಸಭೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇ ಆದಲ್ಲಿ ಮುಂಬರುವ ವಿಧಾನಸಭೆ ಎಲೆಕ್ಷನ್‌ಗೆ ಕೈ ಬಲವರ್ಧನೆಗೆ ಪೂರಕವಾಗುವ ಲೆಕ್ಕಾಚಾರ ಜಯಣ್ಣ ಅವರದ್ದಾಗಿದೆ.