

ತುಮಕೂರು : ಶಿರಾ ತಾಲೂಕು ಬೂವನಹಳ್ಳಿಯಲ್ಲಿ ತುಮಕೂರು ವಿವಿ ಸ್ನಾತಕೋತ್ತರ ಕೇಂದ್ರ ಉದ್ಘಾಟನೆಗೆ ಸಿದ್ಧವಾಗಿದೆ.
25 ಎಕರೆ ಪ್ರದೇಶದಲ್ಲಿ 2.70ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ಶೀಘ್ರದಲ್ಲಿಯೇ ಉದ್ಘಾಟನೆಗೆ ವಿವಿ ಸಿದ್ಧತೆ ನಡೆಸಿದೆ. ಶಿರಾ ಕ್ಯಾಂಪಸ್‌ನಲ್ಲಿ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ತರಗತಿಗೆ 19 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು, ಭವಿಷ್ಯದಲ್ಲಿ ಮತ್ತಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿರುವ ಈ ಹೊಸ ಕ್ಯಾಂಪಸ್, ತುಮಕೂರು ಬಿಟ್ಟು ಹೊರವಲಯದಲ್ಲಿ ಆರಂಭಿಸಿರುವ ಮೊದಲ ಕ್ಯಾಂಪಸ್ ಎಂಬ ಹೆಗ್ಗಳಿಕೆ ಪಡೆಯಲಿದೆ. ಅಲ್ಲದೆ ಕಡಲೆಕಾಯಿ, ಕುರಿ ಹಾಗೂ ಕುರಿಗೆ ಸಂಬಂಧಿಸಿದ ಉತ್ಪನ್ನಗಳ ಮೌಲ್ಯವರ್ಧನೆಗೆ ಸಂಬಂಧಪಟ್ಟ ಸಂಶೋಧನೆಗೆ ಸಹಾಯಕವಾಗಲಿದೆ.
ತುಮಕೂರು ವಿವಿ ಈಗಾಗಲೇ ಸೆಂಟರ್ ಆ್ ಎಕ್ಸಲೆನ್ಸ್ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ವೃತ್ತಿ ತರಬೇತಿ ಕೋರ್ಸ್ ಆರಂಭಕ್ಕೆ ಕಾರ್ಯಯೋಜನೆ ಸಿದ್ಧಪಡಿಸಿದ್ದು, ಪದವಿ, ಸ್ನಾತಕೋತ್ತರ ಪದವಿ ಹಾಗೂ ನಿರುದ್ಯೋಗಿ ಯುವ ಜನರು ಈ ಅಲ್ಪಾವಧಿ ಡಿಪ್ಲೊಮಾ ಕೋರ್ಸ್ ಪಡೆದು ಉದ್ಯೋಗ ಪಡೆಯಲು ಅನುಕೂಲವಾಗುವುದರಿಂದ ಶಿರಾ ಭಾಗದ ವಿದ್ಯಾರ್ಥಿಗಳಲ್ಲಿ ಆಶಾಭಾವನೆ ಮೂಡಿಸಿದೆ.
ಶೈಕ್ಷಣಿಕ ವರ್ಷದಿಂದಲೇ ತರಗತಿ : ಶಿರಾ ಹೊಸ ಕ್ಯಾಂಪಸ್‌ನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತರಗತಿಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಕ್ಷಣಕ್ಕೆ ಗಣಿತ ವಿಭಾಗ ಆರಂಭವಾಗಲಿದ್ದು, ಹಂತಹಂತವಾಗಿ ವಿವಿಧ 26 ಕೋರ್ಸ್‌ಗಳು ಕಾರ್ಯಾರಂಭ ಮಾಡಲಿದೆ. ಎಲ್ಲ ವಿಭಾಗದಲ್ಲಿಯೂ ಕನಿಷ್ಠ 40 ವಿದ್ಯಾರ್ಥಿಗಳಿಗೆ ಪ್ರವೇಶಾತಿ ದೊರೆಯಲಿದೆ.
ತಿಪಟೂರು ಕ್ಯಾಂಪಸ್ ನಿರ್ಮಾಣಕ್ಕೆ ಒಪ್ಪಿಗೆ: ತಿಪಟೂರು ತಾಲೂಕು ರಂಗಾಪುರದಲ್ಲಿ 15 ಎಕರೆ ಭೂಮಿಯನ್ನು ವಿವಿಗೆ ನೀಡಲಾಗಿದ್ದು, ಈ ಜಾಗದಲ್ಲಿಯೂ ತೆಂಗು ಸಂಬಂಧಿಸಿದ ಕೋರ್ಸ್ ಆರಂಭಿಸಲು ಕಟ್ಟಡ ನಿರ್ಮಾಣಕ್ಕೆ ವಿವಿ ಆಡಳಿತ ಮಂಡಳಿ ವಿಶೇಷ ಆಸಕ್ತಿ ವಹಿಸಿದೆ. ಸರ್ಕಾರದಿಂದ ಅನುದಾನಕ್ಕೆ ಮನವಿ ಮಾಡಲಾಗಿದೆ.
ಶಿರಾದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಕ್ಯಾಂಪಸ್ ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ, ಸ್ನಾತಕೋತ್ತರ ಪದವಿಗಳು ಹಾಗೂ 26ಕ್ಕೂ ಹೆಚ್ಚು ಡಿಪ್ಲೊಮಾ ಕೋರ್ಸ್ ಆರಂಭಿಸುವ ಚಿಂತನೆಯಿದೆ. ಗಣಿತ ವಿಷಯದ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ನಡೆದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಡಾ.ವೈ.ಎಸ್.ಸಿದ್ದೇಗೌಡ ಕುಲಪತಿ