ಸಿದ್ದಪ್ಪ ಕಂಬಳಿ ಎಲ್ಲರಿಗೂ ಆದರ್ಶಪ್ರಾಯರು

Khandre Kambali
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬ್ರಿಟಿಷ್ ಆಡಳಿತದಲ್ಲಿ ಮುಂಬೈ ಪ್ರಾಂತ್ಯದ ಅಧಿಕಾರಿಯಾಗಿದ್ದ ಹುಬ್ಬಳ್ಳಿಯವರೇ ಆದ ಸರ್ ಸಿದ್ದಪ್ಪ ಕಂಬಳಿ ಅವರ ವಿಚಾರಗಳು, ದೂರದೃಷ್ಟಿ ಇಂದಿಗೂ ಪ್ರಸ್ತುತವಾಗಿದೆ. ನಿಷ್ಠೆ, ಪ್ರಾಮಾಣಿಕತೆ ಹಾಗೂ ಸರಳ ಜೀವನದಿಂದ ನಮ್ಮೆಲ್ಲರಿಗೂ ಅವರು ಆದರ್ಶಪ್ರಾಯರಾಗಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಹುಬ್ಬಳ್ಳಿ ಅಳಗುಂಡಿ ಓಣಿಯಲ್ಲಿನ ದಿ. ಸರ್ ಸಿದ್ದಪ್ಪ ಕಂಬಳಿ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳಿ ಅವರ ಮನೆಗೆ ಭೇಟಿ ನೀಡಬೇಕೆಂಬುದು ನನ್ನ ಬಹಳ ದಿನಗಳ ಇಚ್ಛೆಯಾಗಿತ್ತು. ಇಂದು ಅವರ ಮನೆ ಹಾಗೂ ಮ್ಯೂಸಿಯಂಗೆ ಭೇಟಿ ನೀಡಿದ್ದು ಸಂತಸ ತಂದಿದೆ. ಅವರ ಪದವಿ, ಜೀವನ ಸಾಧನೆಗಳನ್ನು ಕುಟುಂಬದ ಸದಸ್ಯರು ಬಹಳ ಜತನದಿಂದ ಸಂರಕ್ಷಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

ಕಂಬಳಿ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜದಲ್ಲಿನ ಶೋಷಿತರು, ಬಡವರು, ಮಹಿಳೆಯರಿಗಾಗಿ ಅವರು ಮಾಡಿದ ಕೆಲಸ-ಕಾರ್ಯಗಳು ಐತಿಹಾಸಿಕವಾಗಿವೆ. ಶೈಕ್ಷಣಿಕ ಕ್ಷೇತ್ರದಲ್ಲೂ ಸಹ ಸಾಧನೆಗೈದಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಹೋರಾಟ ಮಾಡಿ ದಂತಕಥೆಯಾಗಿದ್ದಾರೆ. ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ನಾವೆಲ್ಲಾ ಹುಟ್ಟಿರುವುದೇ ಧನ್ಯ ಎಂದು ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ, ಮೋಹನ ಅಸುಂಡಿ, ಲಿಂಗರಾಜ ಕಂಬಳಿ, ವಿರೇಶ ಕುಲಕರ್ಣಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net