

ಪ್ರಮುಖ ಮುಖ್ಯಾಂಶಗಳು
ಮಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಧೈರ್ಯದಿಂದ ಎದುರಿಸಬೇಕು. ನಾವು ಎಚ್ಚರದಿಂದಿರಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ಶುಕ್ರವಾರ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಅಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆ, ಬ್ಲಾಕ್‌ಗಿಂತಲೂ ಬೂತ್ ಮಟ್ಟದಲ್ಲಿ ಸಂಘಟನೆ ಅಗತ್ಯವಾಗಿ ಆಗಬೇಕಾಗಿದೆ. ಟೀಕೆ, ಅವಮಾನಗಳು ಸಹಜ. ಟೀಕೆ ಮಾಡುವುದರಲ್ಲಿ ಕಾಲ ಕಳೆಯದೆ ಪಕ್ಷ ಕಟ್ಟುವಲ್ಲಿ ಕಾರ್ಯನಿರತರಾಗಬೇಕು. ಮುಖಂಡರ ವ್ಯಕ್ತಿತ್ವಕ್ಕೆ ಹಾನಿಯಾದರೆ ಅದು ಪಕ್ಷಕ್ಕೆ ಹಾನಿ ಮಾಡುತ್ತದೆ. ಅದಕ್ಕೆ ಯಾರೊಬ್ಬರೂ ಅವಕಾಶ ನೀಡಬಾರದು. ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರಿಗೂ ಇಂದಲ್ಲದಿದ್ದರೆ ನಾಳೆ ಉತ್ತಮ ಅವಕಾಶ ಸಿಗುವುದು ಖಚಿತ. ಕಾರ್ಯಕರ್ತರು ತಾಳ್ಮೆ ಮತ್ತು ಸಂಯಮದಿಂದ ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಒಮ್ಮಿಂದೊಮ್ಮೆಗೆ ಪ್ರತಿಫಲ ಸಿಗುವುದಿಲ್ಲ. ಸಮಯಕ್ಕಾಗಿ ಕಾಯಬೇಕು. ಒಂದೊಂದೇ ಮೆಟ್ಟಿಲೇರುತ್ತಾ ಸಾಗಬೇಕು. ನಾನು ಕೂಡ ಹಾಗೆಯೇ ಬಂದಿದ್ದೇನೆ. ರಾತ್ರಿ-ಬೆಳಗಾಗುವುದರ ಒಳಗಡೆ ಮುಖಂಡನಾಗಿಲ್ಲ. ಕ್ಷೇತ್ರದ ಜನರ ಪ್ರೀತಿ, ನಾಯಕರ ಬೆಂಬಲದಿಂದ ಉನ್ನತ ಹಂತ ತಲುಪಲು ಸಾಧ್ಯವಾಯಿತು ಎಂದು ಯು.ಟಿ. ಖಾದರ್ ಹೇಳಿದರು.
21ಕ್ಕೆ ಬಿ.ಕೆ. ಹರಿಪ್ರಸಾದ್ ಪದಗ್ರಹಣ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅವರು ಆಯ್ಕೆಯಾಗಿದ್ದು, ಅವರ ಪದಗ್ರಹಣ ಸಮಾರಂಭವು ಜೂ. 21ರಂದು ನಡೆಯಲಿದೆ. ದ.ಕ. ಜಿಲ್ಲೆ ಮೂಲದವರಾದ ಅವರು ಆಯ್ಕೆಯಾಗಿರುವುದು ಜಿಲ್ಲೆಗೆ ಸಂದ ಬಹುದೊಡ್ಡ ಗೌರವ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮುಂದಾಳುಗಳಾದ ಮಮತಾ ಗಟ್ಟಿ, ಲಾವಣ್ಯ ಬಲ್ಲಾಳ್, ಸದಾಶಿವ ಉಳ್ಳಾಲ್, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯ್ಲಿ, ಅಪ್ಪಿ, ನವಾಜ್ ಮುಂತಾದವರು ಉಪಸ್ಥಿತರಿದ್ದರು. ಅಬ್ದುಲ್ ರಜಾಕ್ ಕುಕ್ಕಾಜೆ ನಿರೂಪಿಸಿದರು. ಯು.ಟಿ. ಖಾದರ್ ಸಚಿವರಾದ ಬಳಿಕ ಕಾಂಗ್ರೆಸ್ ಕಚೇರಿಗೆ ಇದು ಅವರ ಮೊದಲ ಭೇಟಿಯಾಗಿತ್ತು.