ಸರ್ ಎಂವಿ ಪರಿಶ್ರಮ, ದಿಟ್ಟತನ, ಪರಿಪೂರ್ಣ ವ್ಯಕ್ತಿತ್ವಕ್ಕೆ ನಿದರ್ಶನ

15 smg 5
ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣದ ಭಾಗವಾಗಿದ್ದ ಇಂಜಿನಿಯರ್‌ಗಳಾದ ಬಿ.ಟಿ.ಕಾಂತರಾಜ್, ಸಂಪತ್‌ಕುಮಾರ್ ಪಿಂಗಳೆ, ಕವಿತಾ, ಎಸ್.ಗಣೇಶ್ ಮುಂತಾದವರನ್ನು ಸನ್ಮಾನಿಸಲಾಯಿತು. ಬಿ.ವಿ.ಜಗದೀಶ್, ಎಚ್.ಎಸ್.ನವೀನ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ಪರಿಶ್ರಮ, ನೇರನುಡಿ, ದಿಟ್ಟತನ, ವಿಧೇಯತೆ, ಸಮಯ ನಿರ್ವಹಣೆ, ಪರಿಪೂರ್ಣ ವ್ಯಕ್ತಿತ್ವಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ನಿದರ್ಶನವಾಗಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಟಿ.ಕಾಂತರಾಜ್ ಹೇಳಿದರು.

ವಿವಿಧ ಇಲಾಖೆಗಳ ಇಂಜಿನಿಯರಿಂಗ್ ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ ಸರ್ ಎಂ.ವಿಶ್ವೇಶ್ವರ ಜನ್ಮದಿನ ಹಾಗೂ ಇಂಜಿನಿಯರ್ಸ್‌ ಡೇನಲ್ಲಿ ಮಾತನಾಡಿದ ಅವರು, ಶಿಸ್ತು, ಬದ್ದತೆ, ಪ್ರಾಮಾಣಿಕತೆ, ಕೌಶಲ, ಬುದ್ದಿಮತ್ತೆ, ದೂರದೃಷ್ಟಿ ಹೀಗೆ ಸರ್‌ಎಂವಿ ಸಕಲಗುಣ ಸಂಪನ್ನರಾಗಿದ್ದರು ಎಂದು ತಿಳಿಸಿದರು. ಅವರಲ್ಲಿ ದೂರದೃಷ್ಟಿ ವಿಶೇಷವಾಗಿತ್ತು. ಅವರು ನಿರ್ಮಿಸಿರುವ ಕೆಆರ್‌ಎಸ್ ಇಂದಿಗೂ ಸದೃಢವಾಗಿದೆ. ಹಲವಾರು ಕಾರ್ಖಾನೆಗಳನ್ನು ಸ್ಥಾಪಿಸಿದ್ದು ಅವರ ಹೆಗ್ಗಳಿಕೆ. ಇಂತಹ ಪ್ರತಿಭೆ ವ್ಯಕ್ತಿಗತವಾಗಿ ಹಾಗೂ ವೃತ್ತಿಪರವಾಗಿ ಅನುಕರಣೀಯ ಎಂದು ಹೇಳಿದರು.
ದೇಶದ ಅಭಿವೃದ್ದಿಯಲ್ಲಿ ಇಂಜಿನಿಯರಿಂಗ್ ವಿಭಾಗ ಪ್ರಮುಖ ಪಾತ್ರ ವಹಿಸುತ್ತದೆ. ರಸ್ತೆಗಳು, ಕಟ್ಟಡಗಳು, ವಿವಿಧ ವಿನ್ಯಾಸಗಳನ್ನು ಇಂಜಿನಿಯರ್‌ಗಳು ನಿರ್ಮಿಸುತ್ತಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಸವಾಲಿನದ್ದಾಗಿತ್ತು. ಸಾವಿರಕ್ಕೂ ಅಧಿಕ ಮಂದಿ ಈ ಯೋಜನೆಗಾಗಿ ಕೆಲಸ ಮಾಡಿದ್ದರು ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಬಿ.ವಿ.ಜಗದೀಶ್ ಮಾತನಾಡಿ, ವ್ಯಕ್ತಿಯಲ್ಲಿ ಒಳ್ಳೆಯ ಗುಣ ಅಥವಾ ಕೌಶಲವನ್ನು ಕಾಣಬಹುದು. ಆದರೆ ವಿಶ್ವೇಶ್ವರಯ್ಯ ಹಲವು ಸದ್ಗುಣಗಳ ಪ್ರತೀಕದಂತಿದ್ದರು. ಹೀಗಾಗಿ ನೂರಾರು ವರ್ಷಗಳ ಬಳಿಕವೂ ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣದ ಭಾಗವಾಗಿದ್ದ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು. ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಎಚ್.ಎಸ್.ನವೀನ್ ಕುಮಾರ್ ಸರ್‌ಎಂವಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ದಾವಣಗೆರೆ ದೊಡ್ಡಬಾತಿಯ ತಪೋವನ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ. ಶಿವರಾಜ ವಿ.ಪಾಟೀಲ್ ಅವರು ಯೋಗ ಮತ್ತು ಆರೋಗ್ಯ ಹಾಗೂ ನಂಜಪ್ಪ ಆಸ್ಪತ್ರೆಯ ಮೆಡಿಕಲ್ ಆಂಕಾಲಜಿಸ್ಟ್ ಡಾ. ನಮ್ರತಾ ಉಡುಪ ಕ್ಯಾನ್ಸರ್ ಕುರಿತು ಉಪನ್ಯಾಸ ನೀಡಿದರು.
ಅಧೀಕ್ಷಕ ಇಂಜಿನಿಯರ್ ಎಸ್.ಗಣೇಶ್, ಕವಿತಾ, ಕಾರ್ಯಪಾಲಕ ಇಂಜಿನಿಯರ್‌ಗಳಾದ ಸಂಪತ್ ಕುಮಾರ್ ಪಿಂಗಳೆ, ನಾಗೇಶ್, ಇಂಜಿನಿಯರ್‌ಗಳಾದ ಚಂದ್ರಶೇಖರ್, ದಿವಾಕರ್, ಸುರೇಶ್, ರಾಜೇಂದ್ರ ಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net