

ಮಂಡ್ಯ: ಉತ್ತಮ ನಡೆ ನುಡಿಯ ಜತೆಗೆ ಕಾಯಕವೇ ಕೈಲಾಸ ಎಂಬುದನ್ನು ಭಾರತರತ್ನ ಸರ್‌ಎಂ.ವಿಶ್ವೇಶ್ವರಯ್ಯ ತೋರಿಸಿಕೊಟಿದ್ದಾರೆ ಎಂದು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿ ಶುಕ್ರವಾರ ಸರ್ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಡಾ.ರಾಜೇಂದ್ರ ಪ್ರಸಾದ್ ವಿದ್ಯಾಸಂಸ್ಥೆ ಹಾಗೂ ಕಾಳೇಗೌಡ ಪ್ರೌಢಶಾಲೆಯ ವತಿಯಿಂದ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸರ್‌ಎಂವಿ ಅವರನ್ನು ಅನ್ನದಾತರೆಂದು ರೈತರು ಮತ್ತು ಜನರು ಭಾವಿಸಿ ಪೂಜಿಸುತ್ತಿದ್ದಾರೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎ.ಎಚ್.ನಾಗರಾಜ್, ಆಡಳಿತಾಧಿಕಾರಿ ಎಸ್.ಚಂದ್ರಪ್ರಭಾ, ಮುಖ್ಯಶಿಕ್ಷಕ ಗೋವಿಂದರಾಜು ಇತರರಿದ್ದರು.
ಹೊಳಲಿನಲ್ಲಿ ಆಚರಣೆ: ತಾಲೂಕಿನ ಹೊಳಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಬಲಮುರಿ ಗಣಪತಿ ದೇವಾಲಯದ ಆವರಣದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಮಾಜಿ ಶಾಸಕ ದಿವಂಗತ ಡಾ.ಎಚ್.ಡಿ. ಚೌಡಯ್ಯ ಅವರ ಪ್ರತಿಮೆಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಸರ್‌ಎಂವಿ ಜಯಂತಿ ಆಚರಿಸಲಾಯಿತು.
ಡೇರಿ ಅಧ್ಯಕ್ಷ ಎಚ್.ಎನ್.ಉಮೇಶ್ ಮಾತನಾಡಿ, ಮಂಡ್ಯ ಜಿಲ್ಲೆ ಹಸಿರಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇರಯ್ಯ ಕೊಡುಗೆ ಅಪಾರ. ಕನ್ನಂಬಾಡಿ ಅಣೆಕಟ್ಟೆ ಕಟ್ಟಿ ಜಲಾಶಯ ನಿರ್ಮಿಸಿ ಜಿಲ್ಲೆಯ ರೈತರಿಗೆ ಅನ್ನದಾತರಾಗಿದ್ದಾರೆ. ನಾವೆಲ್ಲರೂ ಅವರಿಗೆ ಪೂಜೆ ಸಲ್ಲಿಸಿ ಸ್ಮರಣೆ ಮಾಡುವುದು ಅಗತ್ಯ. ಆದರೆ ಈ ಬಾರಿ ಸಂಕಷ್ಟ ಪರಿಸ್ಥಿತಿ ಇರುವುದರಿಂದ ನಮಗೆ ನೀರಿಲ್ಲ. ತಮಿಳುನಾಡಿಗೆ ನೀರು ಹರಿಸುವಂತಹ ದುಸ್ಥಿತಿ ಒದಗಿದೆ ಎಂದು ವಿಷಾದಿಸಿದರು.
ಮಾಜಿ ಅಧ್ಯಕ್ಷರಾದ ಎಚ್.ಎಲ್.ಲಿಂಗರಾಜು, ಟಿ.ಟಿ.ಶ್ರೀನಿವಾಸ್, ಎಚ್.ಬಿ.ಯೋಗೇಶ್, ಎಚ್.ಸಿ.ತಿಮ್ಮೇಗೌಡ, ಉಪಾಧ್ಯಕ್ಷ ಎಚ್.ಎಸ್.ಶಿವರಾಜು, ಮಾಜಿ ಉಪಾಧ್ಯಕ್ಷ ಎಚ್.ಸಿ.ಗಂಗಾಧರ, ಶಿವಲಿಂಗಯ್ಯ, ಶಾಂತಮ್ಮ, ಸಿಇಒ ಎಚ್.ಎನ್.ಶಿವಕುಮಾರ್, ಎಚ್.ಎನ್.ಬೋರಯ್ಯ ಇತರರಿದ್ದರು.