

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್ ಎಂ. ವಿಶ್ವೇಶ್ವರಯ್ಯನವರು ವ್ಯಕ್ತಿಯಲ್ಲದೆ ಸಾಮಾಜಿಕ ಬದ್ಧತೆಯ ಸಂಸ್ಥೆಯ0ತೆ ಇದ್ದವರು. ಶಿಸ್ತು ಮತ್ತು ಮೌಲ್ಯಯುತ ಬದುಕನ್ನು ಕಟ್ಟಿಕೊಂಡಿದ್ದರು. ಸಮಾಜಕ್ಕಾಗಿ ಜೀವನ ನಡೆಸುವ ಮೂಲಕ ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದವರು ಎಂದು ಐಐಟಿಯ ಡೀನ್ ಡಾ. ಎಸ್.ಎಂ ಶಿವಪ್ರಸಾದ ಹೇಳಿದರು.
ನಗರದ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಎಸಿಸಿಇ) ವತಿಯಿಂದ ಸರ್ ಎಂ. ವಿಶ್ವೇಶ್ವರಯ್ಯ ಅವರ 165ನೇ ಜನ್ಮ ದಿನಾಚರಣೆ ಅಂಗವಾಗಿ ರಂಗಾಯಣದಲ್ಲಿ ಆಯೋಜಿಸಿದ್ದ ಅಭಿಯಂತರರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ ಎಂ.ವಿ. ಸಾಧನೆಯ ವ್ಯಾಪ್ತಿಯನ್ನು ನೋಡಿದರೆ ಅವರನ್ನು ಕೇವಲ ಇಂಜಿನಿಯರ್ ಎಂದು ಕರೆಯುವುದು ತಪ್ಪಾಗುತ್ತದೆ. ಅವರೊಬ್ಬ ಮುತ್ಸದ್ಧಿಯಾಗಿದ್ದರು. ಶಿಕ್ಷಣ, ಉದ್ಯಮ, ಉದ್ಯೋಗ, ಕೃಷಿ, ನೀರಾವರಿ, ಕಲೆ, ಸಾಹಿತ್ಯ, ನಾಡು- ನುಡಿಗಳ ಬಗ್ಗೆ ಕಳಕಳಿ ಹೊಂದಿದ್ದರು ಎಂದರು.
ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ವಿಶ್ವೇಶ್ವರಯ್ಯನವರು ಕಂಡ ಪ್ರತಿಯೊಂದು ಕನಸುಗಳು ನಾಡಿನ ಕನಸಾಗಿದ್ದವು. ಆ ಕನಸುಗಳನ್ನು ನನಸು ಮಾಡುವುದಕ್ಕೆ ಅವಿರತವಾಗಿ ಪ್ರಯತ್ನಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸಿಸಿಇ ಅಧ್ಯಕ್ಷ ಸುನಿಲ ಬಾಗೇವಾಡಿ ಮಾತನಾಡಿ, ಕನ್ನಡದ ಕಟ್ಟಾಳು, ಶಿಸ್ತುಬದ್ಧ ಜೀವನ ಹಾಗೂ ಸಮಯ ಪ್ರಜ್ಞೆಯ ಸಾಕಾರ ಮೂರ್ತಿಯಾಗಿದ್ದ ಸರ್ ಎಂ.ವಿ. ಅವರ ಬದುಕು ನಮಗೆಲ್ಲ ಮಾರ್ಗದರ್ಶಿ ಎಂದರು.
ಕಾರ್ಯದರ್ಶಿ ಸಿದ್ದನಗೌಡ ಪಾಟೀಲ, ಖಜಾಂಚಿ ಕಬೀರ ನದಾಫ ವೇದಿಕೆಯಲ್ಲಿದ್ದರು.
ಹುಬ್ಬಳ್ಳಿ ಸ್ಮಾರ್ಟ್ ಸಿಟಿಯ ಮುಖ್ಯ ಇಂಜಿನಿಯರ್ ಎಂ. ನಾರಾಯಣ, ವಾಲ್ಮಿ ಪ್ರಾಧ್ಯಾಪಕ ಬಸವರಾಜ ಬಂಡಿವಡ್ಡರ, ಪಿಡಬ್ಲುಡಿ ಧಾರವಾಡ ವೃತ್ತದ ಅಧೀಕ್ಷಕ ಇಂಜಿನಿಯರ್ ಅರುಣಕುಮಾರ ಪಾಟೀಲ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಜಿ.ಜಿ. ಹಿರೇಮಠ, ಪಿಡಬ್ಲುಡಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮುಸ್ತಫ ಫರಾಸ್ ಅವರನ್ನು ಸನ್ಮಾನಿಸಲಾಯಿತು.
ಅಜಿತ ಕರೋಗಲ್ಲ ನಿರೂಪಿಸಿದರು. ಉಪಾಧ್ಯಕ್ಷ ಅರುಣಕುಮಾರ ಶೀಲವಂತ ಸ್ವಾಗತಿಸಿದರು.
ಪ್ರಕಾಶ ಹಸರಡ್ಡಿ, ಬೀಮಸಿಂಗ್ ಓಲೇಕಾರ, ನಾಗಪ್ಪ, ವಿಜಯ ಹಳ್ಳಿಕೇರಿ, ಅಶೋಕ ಕೌಜಗೇರಿ, ಸಂಜಯ ಕಬ್ಬೂರ, ರಾಜು ಇಟಗಿ, ನಾಗರಾಜ ದೇಸಾಯಿ, ಅಮೀತ ಪಾಟೀಲ, ಸುಮಿತ ಸುಣಗಾರ, ಗುರು ಹುಣಶ್ಯಾಳ, ಇತರರಿದ್ದರು.