

ಹಾಸನ: ಆಸ್ಪತ್ರೆಗೆ ನನ್ನ ಕರೆದೊಯ್ಯಬೇಡಿ..ಇಲ್ಲೇ ಹುಷಾರಾಗ್ತಿನಿ…ನಿಮ್ಮ ಕಾಲಿಗೆ ಬೀಳ್ತಿನಿ ಮಾನಸಿಕ ಹಿಂಸೆ ಕೊಡ್ಬೇಡಿ, ಅಕ್ಕಪಕ್ಕದ ಮನೆಯವರು ತುಂಬಾ ತೊಂದರೆ ಕೊಡ್ತಿದ್ದಾರೆ ಸರ್.. !
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ಶನಿವಾರ ಸಾರ್ವಜನಿಕ ಕುಂದುಕೊರತೆ ಆಲಿಸಲು ಏರ್ಪಡಿಸಿದ್ದ ಫೋನ್ ಇನ್ ಲೈವ್ ಕಾರ್ಯಕ್ರಮದಲ್ಲಿ ನಗರದ ಮಹಿಳೆಯೊಬ್ಬರು ಕಣ್ಣೀರಿಡುತ್ತಾ ಫೋನ್ ಮಾಡಿ ಬೇಡಿಕೊಂಡ ಪರಿ ಇದು.
ಆ ಮಹಿಳೆಯ ಕುಟುಂಬ ಸದಸ್ಯರು ಕಾರ್ಯಕ್ರಮಕ್ಕೆ ಕರೆ ಮಾಡಿ, ಮಹಿಳೆಗೆ ಕರೊನಾ ಶಂಕೆಯಿದೆ. ಆದ್ದರಿಂದ ಹೋಂ ಕ್ವಾರಂಟೈನ್ ಮಾಡಲಾಗಿದೆ. ಆದರೆ ನಮಗೆ ದಿನಬಳಕೆ ವಸ್ತುಗಳು ಸಿಗುತ್ತಿಲ್ಲ. ತಕ್ಷಣವೇ ಆಂಬುಲೆನ್ಸ್ ಮೂಲಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ಸುತ್ತಲಿನ ನಿವಾಸಿಗಳು ನಮ್ಮನ್ನು ಕೀಳಾಗಿ ಕಾಣ್ತಿದಾರೆ ಎಂದು ಮನವಿ ಮಾಡಿಕೊಂಡರು.
ಆದರೆ ಕೆಲವೇ ನಿಮಿಷದ ಬಳಿಕ ಕರೆ ಮಾಡಿದ ಆ ಮಹಿಳೆ, ನನಗೇನು ಆಗಿಲ್ಲ. ಆಸ್ಪತ್ರೆಗೆ ಬರುವುದಿಲ್ಲ, ಇಲ್ಲೇ ಹುಷಾರಾಗ್ತಿನಿ, ಮನೆ ಸಾಮಗ್ರಿ ತಲುಪಿಸಿದರೆ ಅಷ್ಟೆ ಸಾಕು. ಅಕ್ಕಪಕ್ಕದ ಮನೆಯವರು ತುಂಬಾ ತೊಂದರೆ ಕೊಡುತ್ತಿದ್ದಾರೆ. ಏನಾದರೂ ಪರಿಹಾರ ಕಲ್ಪಿಸಿ ಸರ್ ಎಂದು ಕಣ್ಣೀರಿಟ್ಟರು.
ಆಗ ಮಾತನಾಡಿದ ಎಸ್ಪಿ, ಆಂಬುಲೆನ್ಸ್ ಜತೆಗೆ ತಾಲೂಕು ಆರೋಗ್ಯಾಧಿಕಾರಿಯೂ ಬರುತ್ತಾರೆ. ನೀವು ಏಳು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ನಿಮಗೆ ಸೋಂಕು ತಗುಲಿದ್ದರೆ ಕುಟುಂಬದ ಎಲ್ಲರಿಗೂ ಹರಡುವ ಸಾಧ್ಯತೆಯಿದೆ. ಹೀಗೆಲ್ಲ ಮಾತನಾಡಬೇಡಿ ಎಂದು ಮನವರಿಕೆ ಮಾಡಿಕೊಟ್ಟರು. ಆಗ ಮಾತನಾಡಿದ ಮಹಿಳೆ, ಮನೆ ಬಳಿಗೆ ಆಂಬುಲೆನ್ಸ್ ಬರುವುದು ಬೇಡ, ನಾನೇ ಆಸ್ಪತ್ರೆಗೆ ಬರುತ್ತೇನೆಂದು ಕರೆ ಸ್ಥಗಿತಗೊಳಿಸಿದರು.
ಕೌಶಲ್ಯ ಎಂಬುವರು ಕರೆ ಮಾಡಿ, ಹಾಸನ ವಿದ್ಯಾ ನಗರ 2ನೇ ಅಡ್ಡ ರಸ್ತೆಯಲ್ಲಿರುವ ಪಾರ್ಕ್‌ನಲ್ಲಿ ಯುವಕರು ಇಸ್ಪೀಟ್ ಆಟವಾಡುತ್ತಿದ್ದು, ಯಾವಾಗಲೂ ಗಲಾಟೆ ಮಾಡುತ್ತಾರೆ ಎಂದು ದೂರಿದರು.
ಅರಸೀಕೆರೆಯ ಉಲ್ಲಾಸ್ ಎಂಬುವರು, ರೈಲ್ವೆ ಮೈದಾನ, ಮೈಸೂರು ರಸ್ತೆಯಲ್ಲಿ ಪೋಲಿ ಹುಡುಗರ ಹಾವಳಿ ಹೆಚ್ಚಾಗಿದೆ. ಮದ್ಯ ಪದಾರ್ಥಗಳು ರಸ್ತೆಯಲ್ಲಿ ಬಿದ್ದಿರುತ್ತವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಹೀಗೆ ಇತರ ಅನೇಕ ಸಮಸ್ಯೆಗಳ ಕುರಿತು 15 ಕರೆಗಳು ಬಂದವು. ಎಲ್ಲವನ್ನೂ ನೋಟ್ ಮಾಡಿಕೊಂಡ ಎಸ್ಪಿ ಶೀಘ್ರದಲ್ಲೇ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.