

ಬೆಂಗಳೂರು: ರಾಜಧನ ಸಂಗ್ರಹದಲ್ಲಿ ‘ಏಕಗವಾಕ್ಷಿ’ ನಿಯಮ ಅನುಷ್ಠಾನಕ್ಕೆ ತರುವುದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಕಿರುಕುಳ ತಪ್ಪಿಸುವುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ, ಸರ್ಕಾರವನ್ನು ಒತ್ತಾಯಿಸಿದೆ.
ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ನಡೆಸುವ ಮಾಲೀಕರ ಮೇಲೆ ಅಧಿಕಾರಿಗಳು ದುಪ್ಪಟ್ಟು ದಂಡ ವಿಧಿಸಿ ವಸೂಲಿ ಮಾಡುತ್ತಿದ್ದಾರೆ. ಹಾಗಾಗಿ, ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ನಡೆಸುವ ಮಾಲೀಕರಿಗೆ ರಾಜಧನ ವಸೂಲಿ ನಿಯಮವನ್ನು ತೆಗೆದುಹಾಕಬೇಕು. ಆದಾಯ ಸಂಗ್ರಹದಲ್ಲಿರುವ ಗೊಂದಲ ಸರಿಪಡಿಸಿದರೆ ಸರ್ಕಾರಕ್ಕೂ ಹತ್ತಾರು ಕೋಟಿ ರೂ. ಆದಾಯ ಬರಲಿದೆ. ಅವೈಜ್ಞಾನಿಕವಾಗಿ ವಿದ್ಯುತ್ ಬಿಲ್‌ಗೆ ದಂಡ ವಿಧಿಸಿ ಕ್ರಷರ್ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಇಲಾಖೆ ಡ್ರೋನ್ ಸರ್ವೇಯನ್ನು ಕೈಬಿಡಬೇಕೆಂದು ಒಕ್ಕೂಟ ಅಧ್ಯಕ್ಷ ಡಿ. ಸಿದ್ದರಾಜು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹೇಳಿದರು.
ಸರ್ಕಾರಿ ಜಮೀನಿನಲ್ಲಿ ಕ್ರಷರ್ ಘಟಕ ಹಾಕಿದವರಿಗೆ ಹೆಚ್ಚು ಬಾಡಿಗೆ ಶುಲ್ಕ ವಿಧಿಸಲಾಗುತ್ತಿದೆ. ಕಿರುಕುಳ ನೀಡುವ ಮೂಲಕ ಮಾಲೀಕರನ್ನು ಕಚೇರಿಗೆ ಅಲೆಯುವಂತೆ ಮಾಡಲಾಗುತ್ತದೆ. ರಾಜ್ಯದಲ್ಲಿರುವ 3 ಸಾವಿರ ಕ್ರಷರ್‌ಗಳ ಪೈಕಿ ಶೇ.65 ಮುಚ್ಚಿವೆ. ಇನ್ನುಳಿದವು ಸಹ ಮುಚ್ಚುವ ಹಂತಕ್ಕೆ ತಲುಪಲಿವೆ. ಮುಂದಿನ ದಿನಗಳಲ್ಲಿ ಮನೆ ಸೇರಿ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಸೈಜು, ಜಲ್ಲಿ ಕಲ್ಲು ಸಿಗುವುದಿಲ್ಲ. ಈ ಉದ್ದಿಮೆಯನ್ನೇ ನೆಚ್ಚಿಕೊಂಡಿರುವ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ. ಹಾಗಾಗಿ, ನಮ್ಮ ಸಮಸ್ಯೆಗಳನ್ನು ಸರ್ಕಾರ ಹಾಗೂ ಇಲಾಖೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಸಿದ್ದರಾಜು ಎಚ್ಚರಿಕೆ ನೀಡಿದರು.
ಒಕ್ಕೂಟದ ಉಪಾಧ್ಯಕ್ಷರಾದ ಮನೋಜ್ ಶೆಟ್ಟಿ, ಎಚ್.ವಾಗೀಶ್, ಪ್ರಧಾನ ಕಾರ್ಯದರ್ಶಿ ಡಿ.ಆರ್. ಮಹೇಶ್, ಸಂಘಟನಾ ಕಾರ್ಯದರ್ಶಿ ಸಿ.ಎಸ್. ಭಾಸ್ಕರ್ ಮತ್ತಿತರರಿದ್ದರು.