ಒಂದೇ ದಿನ ಇಬ್ಬರಿಗೆ ಲಿವರ್ ಕಸಿ ಯಶಸ್ವಿ

13Jaggu9
ಮಿದುಳು ನಿಷ್ಕ್ರಿಯಗೊಂಡ ರೋಗಿಯ ಲಿವರ್ ಕಸಿ ಮಾಡಲು ಒಯ್ಯುತ್ತಿರುವ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯ ವೈದ್ಯರ ತಂಡ.
Published on

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಒಂದೇ ದಿನ ಎರಡು ಲಿವರ್ ಕಸಿ ಮಾಡುವ ಮೂಲಕ ಸಾವಿನಂಚಿನಲ್ಲಿದ್ದವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ.

ಅಂಗಾಂಗ ಕಸಿಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಸಾಧನೆಯ ಗರಿ ಮುಡಿಗೇರಿಸಿಕೊಂಡಿದೆ. ಈ ಭಾಗದಲ್ಲಿ ಒಂದೇ ದಿನ ಎರಡು ಲಿವರ್ ಕಸಿ ಮಾಡಿದ ಸಾಧನೆ ಇದೇ ಪ್ರಥಮ. ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಕಂಠ ನೀಲಕಂಠಪ್ಪ ಉಂಬರ್ಜೆ (60) ಹಾಗೂ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸವದತ್ತಿ ತಾಲೂಕಿನ ಹಿರೇಬೂದನೂರ ಗ್ರಾಮದ ಯುವಕ ಹಣಮಂತ ಉದ್ದಪ್ಪ ಸ್ವಾರಿ (21) ಎಂಬುವರ ಮಿದುಳು ನಿಷ್ಕ್ರಿಯಗೊಂಡ ಬಳಿಕ ಅವರ ಕುಟುಂಬಸ್ಥರಿಗೆ ಮನವಿ ಮಾಡಿದಾಗ ಅಂಗಾಂಗ ದಾನ ಮಾಡಿದ್ದರು.

ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಗಲಕೋಟೆಯ ಪೊಲೀಸ್ ಸಿಬ್ಬಂದಿಯಾಗಿರುವ ರೋಗಿಗೆ ಹಾಗೂ 63 ವರ್ಷದ ಮಂಗಳೂರಿನ ರೋಗಿಗೆ ಲಿವರ್ ಕಸಿ ಮಾಡಲಾಗಿದೆ. ಯುವಕ ನೀಡಿದ ಎರಡು ಕಿಡ್ನಿಗಳಲ್ಲಿ ಒಂದನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿನ ಮುಧೋಳ ಮೂಲದ ರೋಗಿಗೆ ಕಸಿ ಮಾಡಿದರೆ, ಇನ್ನೊಂದು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿನ ರೋಗಿಗೆ ನೀಡಲಾಯಿತು. ಯುವಕ ಹಣಮಂತ ಉದ್ದಪ್ಪ ಸ್ವಾರಿ ಅವರು ಪತ್ನಿಯ ತವರು ಮನೆಗೆ ಭೇಟಿಗಾಗಿ ತೆರಳುತ್ತಿದ್ದಾಗ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅವರ ಅಂಗಾಗಳಿಂದ ಇತರ ರೋಗಿಗಳಿಗೆ ಸಹಾಯವಾಗಿದೆ. ಲಿವರ್ ಹಾಗೂ ಕಿಡ್ನಿ ಕಸಿಗೊಳಗಾದ ಮೂವರೂ ಗುಣಮುಖರಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ಗ್ಯಾಸ್ಟ್ರೋಎಂಟ್ರಾಲಾಜಿ ಮುಖ್ಯಸ್ಥ ಡಾ.ಸಂತೋಷ ಹಜಾರೆ ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಹಸಿರು ಪಥದಲ್ಲಿ ಧಾರವಾಡ ಎಸ್‌ಡಿಎಂ ಆಸ್ಪತ್ರೆಯಿಂದ ಲಿವರ್ ತರಲಾಯಿತು. ಅದಕ್ಕೆ ಸಹಕರಿಸಿದ ಪೊಲೀಸರ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ ಧನ್ಯವಾದ ತಿಳಿಸಿದ್ದಾರೆ. ಆಸ್ಪತ್ರೆಯ ಡಾ. ಸಂತೋಷ ಹಜಾರೆ, ಲಿವರ್ ಕಸಿ ಶಸ್ತ್ರಚಿಕಿತ್ಸಕ ಡಾ. ಸುದರ್ಶನ ಚೌಗಲೆ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಡಾ.ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಅಭಿನಂದಿಸಿದ್ದಾರೆ.

ಅಂಗಾಂಗ ದಾನ ಶ್ಲಾಘನೀಯ ಕಾರ್ಯ

ಲಿವರ್ ಸೇರಿ ಅಂಗಾಂಗಗಳ ಕಸಿ ಮಾಡಲು ಅತ್ಯಾಧುನಿಕ ಬೃಹತ್ ವೈದ್ಯಕೀಯ ಮೂಲಸೌಕರ್ಯ, ನಿಖರವಾದ ಯೋಜನೆ, ಕಸಿ ನಂತರ ತೀವ್ರ ನಿಗಾ ವಹಿಸಬೇಕಾಗುತ್ತದೆ. ವೃತ್ತಿನಿರತ ತಂಡದ ಕಾರ್ಯಕ್ಕೆ ಆಡಳಿತಾತ್ಮಕ ಸಹಕಾರದ ಅಗತ್ಯವೂ ಅಷ್ಟೇ ಮುಖ್ಯ. ಅದೆಲ್ಲವೂ ಕೆಎಲ್‌ಇ ಆಸ್ಪತ್ರೆಯಲ್ಲಿ ಸಮ್ಮಿಳಿತಗೊಂಡಿದೆ. ಅಂಗಾಂಗ ದಾನ ಮಾಡಿದವರ ಕುಟುಂಬ ಸದಸ್ಯರ ಕಾರ್ಯ ಶ್ಲಾಘನೀಯ. ಓರ್ವ ವ್ಯಕ್ತಿ ನೀಡುವ ಅಂಗಾಂಗದಿಂದ ಇನ್ನೊಬ್ಬರಿಗೆ ಜೀವದಾನ ಮಾಡಿದಂತಾಗುತ್ತದೆ. ಜತೆಗೆ ಇತರರಿಗೂ ಪ್ರೇರಣೆಯಾಗುತ್ತದೆ. ಈ ಭಾಗದ ಯಾವುದೇ ರೋಗಿಯು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯಿಂದ ವಂಚಿತರಾಗಬಾರದು. ಆ ನಿಟ್ಟಿನಲ್ಲಿ ವೈದ್ಯಕೀಯ ಸೇವೆಗಳೆಲ್ಲವನ್ನೂ ಕೆಎಲ್‌ಇ ಆಸ್ಪತ್ರೆಯಲ್ಲಿ ಕೈಗೆಟುಕುವ ದರದಲ್ಲಿ ಲಭಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಡಾ.ಪ್ರಭಾಕರ ಕೋರೆ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net