ದೇಶ ಸೇವೆಯ ಮನೋಭಾವ ಬೆಳೆಯಲಿ

ank news and photos 01
ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಕೆನರಾ ಗುರುಕುಲ ಪಬ್ಲಿಕ್ ಶಾಲೆಯಲ್ಲ್ಲಿ ಏರ್ಪಡಿಸಿದ್ದ ದೇಶ ಭಕ್ತಿಗೀತೆಗಳ ಗಾಯನ ಸ್ಪರ್ಧೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಎ.ಎನ್.ನರೇಂದ್ರ ಕುಮಾರ್ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ವಿದ್ಯಾರ್ಥಿ ಜೀವನದಲ್ಲೇ ಮಕ್ಕಳ ಮನಸ್ಸಿನಲ್ಲಿ ದೇಶಭಕ್ತಿ, ದೇಶ ಸೇವೆಯ ಮನೋಭಾವ ಬಿತ್ತಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಎ.ಎನ್.ನರೇಂದ್ರ ಕುಮಾರ್ ನುಡಿದರು.
ತಾಲೂಕಿನ ಹೆಬ್ಬಗೋಡಿಯ ಕೆನರಾ ಗುರುಕುಲ ಪಬ್ಲಿಕ್ ಶಾಲೆಯಲ್ಲ್ಲಿ ಹಮ್ಮಿಕೊಂಡಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ಥಳೀಯ ಮಟ್ಟದ ದೇಶ ಭಕ್ತಿಗೀತೆಗಳ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಪ್ರತಿವರ್ಷ ಸ್ಥಳೀಯ ಹಂತದಿಂದ ರಾಜ್ಯಮಟ್ಟದ ವರೆಗೆ ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ಸ್‌, ರೇಂಜರ್‌ಗಳಿಗೆ ದೇಶ ಭಕ್ತಿಗೀತೆಗಳ ಗೀತಾಗಾಯನ ಸ್ಪರ್ಧೆಗಳು ನಡೆಯುತ್ತವೆ. ಇದು ಮಕ್ಕಳಲ್ಲಿ ಕೇವಲ ಸ್ಪರ್ಧಾ ಮನೋಭಾವ ಹೆಚ್ಚಿಸುವುದಷ್ಟೇ ಅಲ್ಲ, ಜತೆಗೆ ವಿದ್ಯಾರ್ಥಿಗಳಲ್ಲಿ ದೇಶದ ಬಗ್ಗೆ ಇರುವ ಗೌರವವನ್ನು ಹೆಚ್ಚಿಸಿ, ಅವರನ್ನು ದೇಶ ಭಕ್ತರನ್ನಾಗಿಯೂ ಮಾಡುತ್ತದೆ. ಮಕ್ಕಳ ಪ್ರತಿಭೆಯನ್ನು ಗುರುತಿಸುವಂತಹ ಕಾರ್ಯವೂ ಇದರಲ್ಲಿದೆ ಎಂದರು.
ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿಯೂ ದೇಶಭಕ್ತಿಯ ಹಾಡುಗಳನ್ನು ಹಾಡುವ ಮೂಲಕ ಅನೇಕ ಕ್ರಾಂತಿಕಾರಿಗಳು ಜನಸಾಮಾನ್ಯರಲ್ಲಿ ಸಂಗ್ರಾಮದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿರುವ ನಿದರ್ಶನಗಳೂ ಇವೆ ಎಂದರು.
ಹುಸ್ಕೂರಿನ ಸರ್ಕಾರಿ ಪ್ರೌಢ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು. ಕಬ್ ವಿಭಾಗದಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಡೆಲ್ಲಿ ಪಬ್ಲಿಕ್ ಸ್ಕೂಲ್, ಬುಲ್‌ಬುಲ್ಸ್ ವಿಭಾಗದಲ್ಲಿ ಕಮ್ಮಸಂದ್ರದ ರಾಯಲ್ ಪಬ್ಲಿಕ್ ಸ್ಕೂಲ್, ರೋವರ್ಸ್‌, ರೇಂಜರ್ ವಿಭಾಗಗಳಲ್ಲಿ ಹೆಬ್ಬಗೋಡಿಯ ಎಸ್‌ಎಫ್‌ಎಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಹಂತದ ಸ್ಪರ್ಧೆಗಳಿಗೆ ಆಯ್ಕೆಯಾದರು.
ಶಾಲೆಯ ಪ್ರಾಂಶುಪಾಲೆ ಎಸ್.ಲತಾ ಬಾಯಿ, ಸಿಆರ್‌ಪಿ ವಾಸುದೇವಾಚಾರ್, ಸಂಗೀತ ಶಿಕ್ಷಕರಾದ ಜಿ.ಆನಂದ್, ಕಮಲಾ ದಂಡಗಿ, ಪ್ರಗತಿ ಉಪಾಧ್ಯಾಯ, ಶರಣಪ್ಪ, ಶಿಕ್ಷಕರಾದ ಬ್ಲೈಜ್ ಜಿಯೋ ಥಾಮಸ್, ಉಮಾ ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net