

ಸಂತೋಷ ಮುರಡಿ ಮುಂಡರಗಿ
ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ ನಿರ್ಮಾಣಗೊಂಡು ೧೨ ವರ್ಷ ಕಳೆದಿದೆ. ಆದರೆ, ಇದುವರೆಗೆ ಒಮ್ಮೆಯೂ ಬ್ಯಾರೇಜ್‌ನ ಗೇಟ್‌ಗಳ ನಿರ್ವಹಣೆಯ ಕೆಲಸ ಮಾಡಿಲ್ಲ. ಗೇಟ್ ನಿರ್ವಹಣೆಗೆ ೨೦೨೩ರ ಫೆಬ್ರವರಿಯಲ್ಲಿ ಸರ್ಕಾರದಿಂದ ಅನುಮೋದನೆ ದೊರೆತು ಅನುದಾನ ಸಹ ನೀಡಲಾಗಿತ್ತು. ಆದರೆ, ಟೆಂಡರ್ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಗೇಟ್‌ಗಳ ನಿರ್ವಹಣೆಗೆ ಕಾಲ ಕೂಡಿಬಂದಿಲ್ಲ.
ಸರ್ಕಾರದಿಂದ ಅನುದಾನ ಬಿಡುಗಡೆಗೊಂಡ ನಂತರ ವಿಧಾನಸಭಾ ಚುನಾವಣೆಯ ಪ್ರಕ್ರಿಯೆ ಪ್ರಾರಂಭಗೊಂಡಿದ್ದರಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಯಿತು. ನಂತರ ಮೊದಲನೇ ಬಾರಿಗೆ ನಡೆಸಿದ ಟೆಂಡರ್‌ಗೆ ಹಾಕಿದವರಲ್ಲಿ ಟೆಂಡರ್‌ನ ಕೆಲವೊಂದು ಷರತ್ತುಗಳಿಗೆ ಅರ್ಹತೆಗೊಂಡಿರಲಿಲ್ಲ. ಹೀಗಾಗಿ ಟೆಂಡರ್ ರದ್ದಾಗಿತ್ತು. ನಂತರ ಎರಡನೇ ಬಾರಿಗೆ ಕರೆದ ಟೆಂಡರ್‌ಪ್ರಕ್ರಿಯೆ ಪೂರ್ಣವಾಗಿದೆ. ಬ್ಯಾರೇಜ್‌ನ ಸ್ಟಾಪ್‌ಲಾಲ್ ಗೇಟ್ ನಿರ್ವಹಣೆಗೆ ಸಂಬಂಧಿಸಿದಂತೆ ೨೦೨೪ ಮಾರ್ಚ್ ೧೫ರಂದು ಹಾಗೂ ಮೇನ್ ಗೇಟ್‌ಗಳ ನಿರ್ವಹಣೆಗೆ ೨೦೨೪ ಜುಲೈ ೩೦ರಂದು ಟೆಂಡರ್‌ಪ್ರಕ್ರಿಯೆ ಪೂರ್ಣಗೊಂಡಿದೆ. ಸುಮಾರು ೫.೨ ಕೋಟಿ ರೂ. ವೆಚ್ಚದಲ್ಲಿ ಗೇಟ್‌ಗಳ ನಿರ್ವಹಣೆಗೆ ಕೆಲಸ ನಡೆಯಲಿದೆ. ಆದರೆ, ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದರೂ ಈವರೆಗೂ ಕೆಲಸ ಮಾತ್ರ ಶುರುವಾಗಿಲ್ಲ. ಸದ್ಯ ಬ್ಯಾರೇಜ್‌ನ ಒಳಹರಿವು ಹೆಚ್ಚಿರುವ ಕಾರಣ ಒಳಹರಿವು ಇಳಿಮುಖವಾದ ನಂತರವೇ ಕೆಲಸ ಪ್ರಾರಂಭಗೊಳ್ಳಲಿದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಹೊಸಪೇಟೆ ತುಂಗಭದ್ರಾ ಜಲಾಶಯದ ಗೇಟೊಂದು ಕಿತ್ತು ಹೋಗಿದ್ದರಿಂದ ಅಲ್ಲಿ ತಾತ್ಕಲಿಕವಾಗಿ ಗೇಟ್ ಅಳವಡಿಕೆಯು ಯಶಸ್ವಿಯಾಗಿದೆ. ಇತ್ತ ಗೇಟ್‌ಗಳ ನಿರ್ವಹಣೆ ಇಲ್ಲದ ಸಿಂಗಟಾಲೂರು ಬ್ಯಾರೇಜ್ ಗೇಟ್‌ಗಳ ಸ್ಥಿತಿ ಏನು? ಎಂಬ ಆತಂಕವೂ ಈ ಭಾಗದ ಜನರಲ್ಲಿ ಮನೆ ಮಾಡಿದೆ. ೨೦೧೨ರಲ್ಲಿ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್ ಲೋಕಾರ್ಪಣೆ ಮಾಡಲಾಯಿತು. ಅಂದಿನಿಂದ ಈವರೆಗೂ ಬ್ಯಾರೇಜ್ ನಿರ್ವಹಣೆ ಕೆಲಸಮಾಡಿಲ್ಲ.
ನಿರ್ವಹಣೆ ಕೊರತೆಯಿಂದಾಗಿ ಬ್ಯಾರೇಜ್ ಗೇಟ್‌ಗಳು ಹಾಳಾಗುವ ಹಂತಕ್ಕೆ ತಲುಪಿವೆ. ಬ್ಯಾರೇಜ್‌ನಲ್ಲಿ ಒಟ್ಟು ೨೬ ಗೇಟ್‌ಗಳನ್ನು ಅಳವಡಿಸಲಾಗಿದೆ. ೨೬ ಗೇಟ್‌ಗಳ ಪೈಕಿ ಸದ್ಯ ೧೨ ಗೇಟ್‌ಗಳು ದುರಸ್ತಿ ಸ್ಥಿತಿಗೆ ತಲುಪಿವೆ. ಗೇಟ್ ನಂ. ೧, ೪, ೯, ೧೦, ೧೧, ೧೩, ೧೬, ೧೮, ೧೯, ೨೧, ೨೫, ೨೬ ಈ ಗೇಟ್‌ಗಳ ದುರಸ್ತಿ ತುಂಬಾ ಅಗತ್ಯವಿದೆ. ಗೇಟ್‌ನಲ್ಲಿ ರಬ್ಬರ್ ಸೀಲ್, ರೋಲರ್, ರೂಪ್, ಕ್ರೇನ್ ಹಾಳಾಗಿವೆ. ಈಗ ಎಲ್ಲ ಗೇಟ್‌ಗಳ ನಿರ್ವಹಣೆ ತುಂಬಾ ಅಗತ್ಯವಿದೆ. ಹಾಗೆಯೆ ಬ್ಯಾರೇಜ್‌ನ ಸ್ಟಾಪ್‌ಲಾಲ್ ಗೇಟ್ ಕೆಲಸ ನಿರ್ವಹಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಗೇಟ್‌ಗಳನ್ನು ಇಳಿಸುವುದಕ್ಕೆ ಮತ್ತು ಎತ್ತುವುದಕ್ಕೆ ಸಮಸ್ಯೆಯಾಗುತ್ತಿದೆ.
ಬ್ಯಾರೇಜ್‌ನಲ್ಲಿ ಒಟ್ಟು ೩.೧೨ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಹಿನ್ನೀರಿನಿಂದ ಮುಳುಗಡೆ ಪ್ರದೇಶಕ್ಕೆ ಒಳಪಡುವ ನಾಲ್ಕು ಗ್ರಾಮಗಳು ಸಂಪೂರ್ಣ ಸ್ಥಳಾಂತರಗೊಳ್ಳದ ಕಾರಣ ಸದ್ಯ ೧.೯೨ ಟಿಎಂಸಿ ನೀರು ಮಾತ್ರ ಸಂಗ್ರಹಿಸಿಟ್ಟು, ಹೆಚ್ಚುವರಿ ನೀರನ್ನು ತುಂಗಭದ್ರಾ ನದಿಗೆ ಹರಿ ಬಿಡಲಾಗುತ್ತಿದೆ.
ಬ್ಯಾರೇಜ್ ಹಿನ್ನೀರಿನಲ್ಲಿ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಗ್ರಾಮೀಣ ಭಾಗಕ್ಕೆ ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಹೂವಿನಹಡಗಲಿ ಕುಡಿಯುವ ನೀರಿನ ಯೋಜನೆ, ಗದಗ-ಬೆಟಗೇರಿ ನಗರಕ್ಕೆ ಪೂರೈಸುವ ನಿರಂತರ ಕುಡಿಯುವ ನೀರಿನ ಯೋಜನೆಗೆ ಈ ನೀರು ಆಧಾರವಾಗಿದೆ. ಬ್ಯಾರೇಜ್‌ನ ಗೇಟ್‌ಗಳ ನಿರ್ವಹಣೆ ಕೊರತೆಯಿಂದ ಗೇಟ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದಾಗಲೂ ಪ್ರತಿದಿನ ಬ್ಯಾರೇಜ್‌ನಿಂದ ನೀರು ಸೋರಿಕೆಯಾಗುತ್ತಿದ್ದರೂ ಗೇಟ್‌ಗಳನ್ನು ದುರಸ್ತಿಗೊಳಿಸುವ ಕಾರ್ಯ ಮಾತ್ರ ನಡೆದಿಲ್ಲ. ನಿರಂತರ ನೀರು ಸೋರಿಕೆಯಾಗುವುದರಿಂದ ಬೇಸಿಗೆ ಸಂದರ್ಭದಲ್ಲಿ ಬ್ಯಾರೇಜ್‌ನಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಬಹುದು ಎಂಬ ಆತಂಕ ಜನರಲ್ಲಿದೆ. ಆದ್ದರಿಂದ ಅಧಿಕಾರಿಗಳು ಆದಷ್ಟು ಬೇಗ ಗೇಟ್‌ಗಳ ನಿರ್ವಹಣೆಗೆ ಮುಂದಾಗಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.
ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್‌ನ ಗೇಟ್‌ಗಳ ನಿರ್ವಹಣೆ ಕೆಲಸ ಈವರೆಗೂ ಮಾಡಿಲ್ಲ. ಇದರಿಂದ ನೀರು ಸೋರಿಕೆಯಾಗುತ್ತಿದೆ. ಎರಡು ವರ್ಷದಿಂದ ಬ್ಯಾರೇಜ್ ಗೇಟ್‌ಗಳ ನಿರ್ವಹಣೆ ಮಾಡುವಂತೆ ಒತ್ತಾಯಿಸುತ್ತಾ ಬರಲಾಗಿದೆ. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ಮುಂಜಾಗ್ರತೆಯಿಂದ ಗೇಟ್‌ಗಳ ನಿರ್ವಹಣೆ ಕೆಲಸ ಮಾಡಬೇಕು. ಹಾಗೆಯೆ ಬ್ಯಾರೇಜ್‌ನಿಂದ ನೀರು ಸೋರಿಕೆಯಾಗದಂತೆ ನೀಗಾ ವಹಿಸಬೇಕು.ವೈ.ಎನ್. ಗೌಡರ, ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ಮುಂಡರಗಿ
ಈಗಾಗಲೆ ನೀರಾವರಿ ನಿಗಮದಿಂದ ಗೇಟ್‌ಗಳ ನಿರ್ವಹಣೆಗೆ ಅನುದಾನ ಬಂದಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬ್ಯಾರೇಜ್‌ನಲ್ಲಿ ನೀರಿನ ಒಳಹರಿವಿನ ಪ್ರಮಾಣ ಕಡಿಮೆಯಾದ ತಕ್ಷಣ ಗೇಟ್‌ಗಳ ದುರಸ್ತಿಗೊಳಿಸುವ ಕೆಲಸ ಪ್ರಾರಂಭಿಸಲಾಗುತ್ತದೆ.ರಾಘವೇಂದ್ರ ಎಚ್.ಸಿ. ಎಇಇ ಸಿಂಗಟಾಲೂರು ಏತ ನೀರಾವರಿ ಯೋಜನೆ ಹೂವಿನಹಡಗಲಿ