

ಅರಸೀಕೆರೆ: ದೇಶದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮುಂಚೂಣಿಯಲ್ಲಿದ್ದರು ಎಂದು ರೈತ ಸಂಘದ ರಾಜ್ಯ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಜಾಗತಿಕ ಆರ್ಥಿಕ ಸ್ಥಿತಿ ಹಳಿತಪ್ಪಿದ ಸನ್ನಿವೇಶದಲ್ಲಿ ಹಣಕಾಸು ಸಚಿವ ಹೊಣೆಗಾರಿಕೆಯನ್ನು ಡಾ.ಮನಮೋಹನ್ ಸಿಂಗ್ ಸಮರ್ಥವಾಗಿ ನಿಭಾಯಿಸಿ ಭಾರತದ ಶಕ್ತಿ ಏನೆಂಬುದನ್ನು ಸಾಬೀತು ಮಾಡಿದ್ದರು. ಹತ್ತು ವರ್ಷ ಪ್ರಧಾನಿ ಹುದ್ದೆ ಅಲಂಕರಿಸಿ ಆಡಳಿತದಲ್ಲಿ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದ ನೀತಿಗಳನ್ನು ಅಳವಡಿಸಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು. ಅತಿ ಹೆಚ್ಚು ಶೈಕ್ಷಣಿಕ ಅರ್ಹತೆ ಹೊಂದಿದ್ದ ಡಾ.ಮನಮೋಹನ್ ಸಿಂಗ್ ಸಂಸದ, ಸಚಿವ ಸ್ಥಾನ ಒಳಗೊಂಡಂತೆ ವಿವಿಧ ಬಗೆಯ ರಾಜಕೀಯ ಸ್ಥಾನಮಾನಗಳಿಗೆ ಧಕ್ಕೆ ಬಾರದಂತೆ ನಡೆದುಕೊಂಡು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅವರ ನಿಧನ ರಾಜಕೀಯ ಸೇರಿದಂತೆ ಎಲ್ಲ ರೀತಿಯ ಕ್ಷೇತ್ರಗಳಿಗೆ ತುಂಬಲಾರದ ನಷ್ಟ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂಕೋಡನಹಳ್ಳಿ ಶಂಕರಪ್ಪ ಮಾತನಾಡಿ, ಸುದೀರ್ಘ ಕಾಲ ಲೋಕಸಭೆ ಪ್ರತಿನಿಧಿಸಿ ದೇಶದ ನಾಗರಿಕರು ಮೆಚ್ಚುವ ರೀತಿ ಆಡಳಿತ ನಡೆಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ, ಉದ್ಯೋಗ ಖಾತ್ರಿ ಯೋಜನೆ, ಶೈಕ್ಷಣಿಕ ಹಕ್ಕು ಕಾಯ್ದೆ ಸೇರಿದಂತೆ ಹಲವು ಜನಪರ ಯೋಜನೆ ಕೊಡುಗೆಯಾಗಿ ನೀಡಿರುವುದು ಸಾಮಾನ್ಯ ಸಂಗತಿಯಲ್ಲ. ರಾಜಕೀಯ ಕರ್ಮಯೋಗಿ, ಆರ್ಥಿಕ ತಜ್ಞ, ಚಿಂತಕ, ಲೇಖಕನ್ನು ಕಳೆದುಕೊಂಡು ಬಡವಾಗಿದ್ದೇವೆ ಎಂದು ಕಂಬನಿ ಮಿಡಿದರು. ಮುಖಂಡರಾದ ಅಯೂಬ್ ಪಾಷಾ, ದಸ್ತಗಿರಿ, ಏಜಾಜ್ ಅಹಮದ್ ಇದ್ದರು.