24 ಗಂಟೆ ನಿರರ್ಗಳ 270 ಹಾಡುಗಳ ಗಾಯನ ಗೋಲ್ಡನ್ ಬುಕ್ ಆ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ ಗಾಯಕ ಯಶವಂತ್ ಎಂ.ಜಿ.

Mng-jun 5-Yashavantha record
Published on

ಮಂಗಳೂರು: ನಿರಂತರವಾಗಿ 24 ಗಂಟೆಗಳ ಕಾಲ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ 270 ಹಾಡುಗಳನ್ನು ಹಾಡುವ ಮೂಲಕ ಕರಾವಳಿ ಮೂಲದ ಯಶವಂತ್ ಎಂ.ಜಿ. ಅವರು ವಿಶ್ವ ದಾಖಲೆ ನಿರ್ಮಿಸಿ ಗೋಲ್ಡನ್ ಬುಕ್ ಆ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾರೆ.

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ಆರಂಭವಾದ ‘ಬಾಲಗಾನ ಯಶೋಯಾನ’ ನಿರರ್ಗಳ ಗಾಯನ ಬುಧವಾರ ಮಧ್ಯಾಹ್ನ 3 ಗಂಟೆಗೆ ಸಮಾಪನಗೊಳ್ಳುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಗಾನ ಗಂಧರ್ವ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮ ದಿನೋತ್ಸವದ ಪ್ರಯುಕ್ತ ಯಶವಂತ್ ಅವರು ಏಕಾಂಗಿಯಾಗಿ ಹಾಡುವ ಮೂಲಕ ದಾಖಲೆಯ ಗಾಯನ ಕಾರ್ಯಕ್ರಮವನ್ನು ನಡೆಸಿದ್ದಾರೆ.

ಕಾರ್ಯಕ್ರಮ ಪೂರ್ಣ ವೀಕ್ಷಿಸಿದ ಬಳಿಕ ಗೋಲ್ಡನ್ ಬುಕ್ ಆ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವಿಶ್ನೊಯ್ ಅವರು ಗಣ್ಯರ ಸಮ್ಮುಖದಲ್ಲಿ ಪ್ರಮಾಣ ಪತ್ರ ಹಸ್ತಾಂತರಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಮನೀಶ್ ವಿಶ್ನೊಯ್, ‘ಮಾತೆರೆಗ್ಲಾ ನಮಸ್ಕಾರ’ ಎನ್ನುವ ಮೂಲಕ ಮಾತು ಆರಂಭಿಸಿದರು. ಯಶವಂತ್ ಅವರು ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮ ದಿನ ಆಚರಿಸಿದಂತೆ ಇಲ್ಲಿಯ ವರೆಗೆ ಯಾರೂ ಆಚರಿಸಿಲ್ಲ. ಯಶವಂತ್ ಅವರು ವಿಶ್ವ ದಾಖಲೆ ಮಾಡಿರುವುದು ಅತ್ಯಂತ ಕಠಿನ ವಿಷಯದಲ್ಲಿ. 24 ಗಂಟೆಗಳ ಕಾಲ ನಿರಂತರ ಗಾಯನ ಸಾಮಾನ್ಯ ವಿಷಯವಲ್ಲ. ಸಾಕಷ್ಟು ವಿಶ್ವ ದಾಖಲೆಗಳನ್ನು ನಾನು ಕಂಡಿದ್ದು, ಇಂತಹ ಮಧುರವಾದ ದಾಖಲೆ ಯಾವತ್ತೂ ನೋಡಿಲ್ಲ ಎಂದರು.

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಮಂಗಳೂರು ಎಸಿಪಿ ಗೀತಾ ಕುಲಕರ್ಣಿ, ದೈಜಿವರ್ಲ್ಡ್ ಸಂಸ್ಥೆಯ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಮೂಡುಬಿದರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ಉದ್ಯಮಿ ಪೂರ್ಣಚಂದ್ರ ಜೈನ್, ಜಿ.ಎಸ್. ಕಾಮತ್, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ, ಮನಪಾ ನಿಕಟಪೂರ್ವ ಸದಸ್ಯ ಜಗದೀಶ್ ಶೆಟ್ಟಿ, ಯಶವಂತ್ ಅವರ ತಾಯಿ ಹೇಮಾವತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net