

ಮೈಸೂರು: ಇಲ್ಲಿನ ಆತ್ಮೀಯತೆ ತುಂಬ ಇಷ್ಟವಾಗಿದ್ದು, ತಾಯಿ ಚಾಮುಂಡೇಶ್ವರಿಯೇ ನನ್ನನ್ನು ಕರೆಯಿಸಿಕೊಂಡಿದ್ದಾಳೆ ಎಂದು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ, ಮೈಸೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು 1974ರಲ್ಲಿ ಮೈಸೂರಿನಲ್ಲಿ ಕಾರ್ಯಕ್ರಮವನ್ನು ನೀಡಲು ಬಂದಿದ್ದೆ. ಆ ಸಮಯದಿಂದಲೂ ಮೈಸೂರಿನ ಆತ್ಮೀಯತೆ ಇಷ್ಟವಾಯಿತು. ಆ ದಿನ ಜಿ.ಕೆ.ವೆಂಕಟೇಶ್, ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಅವರ ಜತೆಯಲ್ಲಿ ಕೀ ಬೋರ್ಡ್ ನುಡಿಸಲು ಬಂದವನು ನಾನು ಎಂದರು.
ಕಾರ್ಯಕ್ರಮದ ನಂತರದಲ್ಲಿ ನೇರವಾಗಿ ಶಕ್ತಿ ದೇವತೆ ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳಿದೆ. ಅಲ್ಲಿನ ದೇವಿಯ ಸೌಂದರ್ಯ ನೋಡಲು ಎರಡು ಕಣ್ಣುಗಳೇ ಸಾಲದು. ಅಮ್ಮ ಎಂದು ಕೂಗಿದರೆ ಮೈ ನವಿರೇಳುವುದು ಎಂಬ ಗೀತೆಯ ಮೂಲಕ ದೇವಿ ಮೂಕಂಬಿಕೆಯನ್ನು ಆರಾಧಿಸಿದರು.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೇ ನನ್ನನ್ನು ಇಂದು ಮೈಸೂರಿಗೆ ಕರೆಸಿ ನಿಮ್ಮನ್ನು ನೋಡುವ ಅವಕಾಶ ದೊರಕಿದೆ ಎಂದು ಚಾಮುಂಡೇಶ್ವರಿಯ ಗೀತೆಯಾದ ಜನನಿ ಜಗನಿ ಎಂಬ ತಮಿಳು ಗೀತೆಯ ಮೂಲಕ ಗಾಯನ ಪ್ರಸ್ತುತಪಡಿಸಿದರು.
ನಿರ್ದೇಶಕ ಎಸ್.ನಾರಾಯಣ, ಸಂಗೀತ ಬರಹಗಾರರಾದ ವಿ.ಮನೋಹರ್, ಕೆ.ಕಲ್ಯಾಣ್ ಅವರೂ ಇಳಯರಾಜಾ ಅವರ ಜೊತೆಯ ಅನುಭವವನ್ನು ಹಂಚಿಕೊಂಡರು.
ಯುವ ದಸರಾಕ್ಕೆ ತೆರೆ
ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ, ಜೋಶ್ ನೀಡುವ ಯುವ ದಸರಾ ಇಳಯರಾಜಾ ಅವರ ಸುಮಧುರ ಸಂಗೀತ ಸಂಜೆಯೊಂದಿಗೆ ಸಮಾಪ್ತಿಗೊಂಡಿತು.
ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ಆರಂಭಗೊಂಡು ಯುವ ಜನತೆ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಯುವ ದಸರಾ, ಎರಡನೇ ದಿನ ಕನ್ನಡಿಗರೇ ಆದ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಸಂಗೀತ, ಹಾಡುಗಳಿಗೆ ಕುಣಿದು ಕುಪ್ಪಳಿಸುವಂತಾಯಿತು.
ಬಳಿಕ ಬಾಲಿವುಡ್ ಗಾಯಕ ರ‌್ಯಾಪರ್ ಆಗಿರುವ ಬಾದ್‌ಷಾ ಮತ್ತಷ್ಟು ಜೋಶ್ ಹೆಚ್ಚಿಸಿದರು. ನಾಲ್ಕನೇ ದಿನ ಖ್ಯಾತ ಸಂಗೀತ ಸಂಯೋಜಕ, ಗಾಯಕ ಎ.ಆರ್.ರೆಹಮಾನ್ ಯುವ ದಸರಾದಲ್ಲಿ ಮೋಡಿ ಮಾಡಿದ್ದರು.