ಸಿಂಗಟಾಲೂರು ಏತ ನೀರಾವರಿಗೆ ಭೂಮಿ ಕೊಟ್ಟ ರೈತರಿಗೆ ಸಿಗದ ಪರಿಹಾರ: ಜು.11ರಿಂದ ಅನಿರ್ದಿಷ್ಟಾವಧಿ ಧರಣಿ

090722 Sharanappa Jadi Koppal
ಶರಣಪ್ಪ ಜಡಿ, ರೈತ ಮುಖಂಡ.
Published on

ಕೊಪ್ಪಳ: ಸಿಂಗಟಾಲೂರು ಏತ ನೀರಾವರಿಗಾಗಿ ರೈತರು 235 ಎಕರೆ ಭೂಮಿ ಕಳೆದುಕೊಂಡು ದಶಕ ಕಳೆದಿದೆ. ಈವರೆಗೆ ಸರ್ಕಾರ ಪರಿಹಾರ ನೀಡಿಲ್ಲ. ಹೀಗಾಗಿ ಜು.11ರಿಂದ ಅಳವಂಡಿ ನೀರಾವರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ರೈತ ಮುಖಂಡ ಶರಣಪ್ಪ ಜಡಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆರು ಪ್ಯಾಕೇಜ್‌ನಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈಗಾಗಲೇ 5 ಪ್ಯಾಕೇಜ್‌ಗಳಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿದ್ದಾರೆ. ಅಳವಂಡಿ, ಕವಲೂರು, ಮೈನಳ್ಳಿ ಮತ್ತು ಬಿಕನಳ್ಳಿ ಗ್ರಾಮದ 250 ರೈತರ ಹೊಲದಲ್ಲಿ ಕಾಲುವೆ ನಿರ್ಮಿಸಿ ದಶಕ ಕಳೆದಿದೆ. ಆದರೆ, ಪರಿಹಾರ ನೀಡುತ್ತಿಲ್ಲ. ಸಾವಿರಾರು ಕೋಟಿ ರೂ. ಯೋಜನೆ ಇದಾಗಿದ್ದು, ನಮಗೆ ಬರಬೇಕಾದ 9 ಕೋಟಿ ರೂ. ಸರ್ಕಾರ ನೀಡುತ್ತಿಲ್ಲ. ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಸಂಸದ ಸಂಗಣ್ಣ ಕರಡಿ ಸಹ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆಯೇ ಹೊರತು ಪರಿಹಾರ ಕೊಡಿಸುತ್ತಿಲ್ಲ. ಆದ್ದರಿಂದ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ರೈತರಾದ ಈಶಪ್ಪ ಜೋಳದ್, ಮಲ್ಲಪ್ಪ ಕುರಿ, ಸುರೇಶ ದಾಸರಡ್ಡಿ, ಭೀಮರಡ್ಡಿ ಗದ್ದಿಕೇರಿ, ಸಿದ್ದರಡ್ಡಿ ಮೈನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net