

ಹೂವಿನಹಡಗಲಿ: ರಾಜವಾಳ ಗ್ರಾಮದ ಸಮೀಪವಿರುವ ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಕಾಲುವೆಗಳಿಗೆ ನೀರು ಸರಬರಾಜು ಮಾಡುವ ಮೋಟಾರ್ ಪಂಪ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ 6 ಎಂವಿಎ ಸಾಮರ್ಥ್ಯದ ಟಿಸಿ ಸುಟ್ಟಿದೆ. ಹೀಗಾಗಿ ನಾಲೆಗೆ ನೀರು ಪೂರೈಕೆ ಸ್ಥಗಿತವಾಗಿದೆ.
ಬ್ಯಾರೇಜಿನ ಬಲದಂಡೆ ಕಾಲುವೆಗಳಿಗೆ ನೀರೆತ್ತುವ ಪಂಪ್‌ಗಳಿಗೆ ಈ ಟಿಸಿಯಿಂದಲೇ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಬುಧವಾರ ವಿದ್ಯುತ್ ತಂತಿಗಳು ಸುಟ್ಟ ಕಾರಣ ಕಾಲುವೆಗಳಿಗೆ ನೀರು ತಾತ್ಕಾಲಿಕವಾಗಿ ಬಂದ್ ಆಗಿದೆ.
ಬಲದಂಡೆಯ ಹಡಗಲಿ ತಾಲೂಕಿನ ರೈತರ ಸುಮಾರು 35 ಸಾವಿರ ಎಕರೆ ಪ್ರದೇಶಕ್ಕೆ ನೀರೊದಗಿಸುವ ಯೋಜನೆ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಚೈನ್ ಲಿಂಕ್ ಕಳಚಿ ನೀರು ಪೋಲಾದ ಕಾರಣ ಬ್ಯಾರೇಜಿನ ಅಧಿಕಾರಿಗಳು ಯೋಜನೆಯ ಸುಮಾರು 28 ಗೇಟ್‌ಗಳ ದುರಸ್ತಿ ಕಾರ್ಯ ನಡೆಸಲು ಮುಂದಾಗಿದ್ದಾರೆ.
ಇದೀಗ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿ ಮತ್ತೆ ತಾಲೂಕಿನ ಕಾಲುವೆಗಳಿಗೆ ನೀರು ಹರಿಯದಂತಾಗಿದೆ. ಅಲ್ಲದೆ ಕಾಲುವೆಗಳಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವೂ ನಿಂತಿದೆ.
ವಿದ್ಯುತ್ ಪರಿವರ್ತಕ ದುರಸ್ತಿಗೊಳಿಸಲು ಬೆಂಗಳೂರಿನ ತಜ್ಞರ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದೆ. ಟಿಸಿ ರಿಪೇರಿಗೆ 10-12 ದಿನ ಆಗಲಿದ್ದು, ನಂತರ ಕಾಲುವೆಗಳಿಗೆ ನೀರು ಹರಿಸಲಾಗುವುದು.
| ಶಿವಮೂರ್ತಿ, ಇಇ, ಸಿಂಗಟಾಲೂರು ಏತ ನೀರಾವರಿ ಯೋಜನೆ, ಹೂವಿನಹಡಗಲಿ