ಕರೊನಾಗೆ ಮೂವರ ಸಾವು ; ಹುಳಿಯಾರು ಹೋಬಳಿಯ ಸಿಂಗಾಪುರ ಸೀಲ್‌ಡೌನ್

05 c n halli sinagapura 31
Published on

ಚಿಕ್ಕನಾಯಕನಹಳ್ಳಿ : ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಹುಳಿಯಾರು ಹೋಬಳಿ ಸಿಂಗಾಪುರದಲ್ಲಿ 51 ಸೋಂಕಿತರಿದ್ದಾರೆ. ಕಳೆದೊಂದು ವಾರದಿಂದ ಮೂವರು ಕರೊನಾಗೆ ಬಲಿಯಾಗಿದ್ದಾರೆ. ಹಾಗಾಗಿ, ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಡೆಲ್ಟಾ ಪ್ಲಸ್ ವೈರಸ್ ತಗುಲಿರುವ ಬಗ್ಗೆಯೂ ಪರೀಕ್ಷೆ ನಡೆಸಲಾಗುತ್ತಿದೆ.

223 ಮನೆಯ ಸಿಂಗಾಪುರದಲ್ಲಿ 960 ಜನರಿದ್ದು ಇವರ ಪೈಕಿ 51 ಜನರಿಗೆ ಸೋಂಕು ತಗುಲಿದೆ, ಗ್ರಾಮದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಹೆಚ್ಚು ಜನರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೋಂಕು ಹೆಚ್ಚಾಗಿದೆ. ಜನರು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ಗ್ರಾಮಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಭೇಟಿ ನೀಡಿ ಸೂಕ್ತ ಮುಂಜಾಗ್ರತೆಗೆ ಸೂಚಿಸಿದ್ದಾರೆ.

ಗ್ರಾಮಸ್ಥರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಡೆಲ್ಟಾ ವೈರಸ್ ಎಂಬ ವದಂತಿಗೆ ಭಯಪಡದೆ ಎಲ್ಲರೂ ಕರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಗ್ರಾಮದಲ್ಲಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ, ಲಸಿಕೆ ಹಾಕಿಸಿಕೊಳ್ಳಲು ಜನರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಾಲೂಕು ತಹಸೀಲ್ದಾರ್ ತೇಜಸ್ವಿನಿ ಮನವಿ ಮಾಡಿದ್ದಾರೆ.

ತುರ್ತು ನಿಗಾ ಘಟಕದಲ್ಲಿ 51 ಜನರಿಗೆ ಚಿಕಿತ್ಸೆ : ತುಮಕೂರು ಜಿಲ್ಲೆಯಲ್ಲಿ ಸೋಮವಾರ 126 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು ವಿವಿಧ ಆಸ್ಪತ್ರೆಗಳಿಂದ ಗುಣಮುಖರಾದ 99 ಜನರು ಮನೆಗೆ ವಾಪಸಾದರು. ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1330ಕ್ಕಿಳಿದಿದ್ದು ಸೋಂಕು ಗಣನೀಯವಾಗಿ ಕಡಿಮೆಯಾಗುತ್ತಿದೆ. ಎಲ್ಲಾ ತಾಲೂಕಿನಲ್ಲಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಸೋಂಕು ಪತ್ತೆಯಾಗುತ್ತಿದೆ. ಒಟ್ಟು ಸಾವಿನ ಸಂಖ್ಯೆ 1033ಕ್ಕೇರಿದೆ. ತುರ್ತು ನಿಗಾ ಘಟಕದಲ್ಲಿ 51 ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಚಿ.ನಾ.ಹಳ್ಳಿ , ಗುಬ್ಬಿ ತಲಾ 10, ಕೊರಟಗೆರೆ 5, ಕುಣಿಗಲ್, ಮಧುಗಿರಿ ತಲಾ 6, ಪಾವಗಡ 2, ಶಿರಾ 6, ತಿಪಟೂರು 16, ತುಮಕೂರು 31 ಹಾಗೂ ತುರುವೇಕೆರೆ ತಾಲೂಕಿನಲ್ಲಿ 5 ಹಾಗೂ ಹೊರ ಜಿಲ್ಲೆಯ 29 ಒಟ್ಟು 126 ಜನರಿಗೆ ಸೋಂಕು ದೃಢವಾಗಿದೆ.

51 ಜನರಲ್ಲಿ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ 14 ದಿನ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸೋಂಕು ಸಂಪೂರ್ಣ ಹೋಗಿಲ್ಲದ ಕಾರಣಕ್ಕೆ ಶುಭ ಸಮಾರಂಭಗಳಲ್ಲಿ ಹೆಚ್ಚು ಜನರು ಭಾಗವಹಿಸಬಾರದು, ಕರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಡಾ.ನವೀನ್, ತಾಲೂಕು ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net