ಅ೨೮ ರಂದು ಕೋಟಿ ಕಂಠ ಗೀತ ಗಾಯನಕ್ಕೆ’ ಕೈಜೋಡಿಸಿ: ಭಂವರ್ ಸಿಂಗ್ ಮೀನಾ

MDK03
Published on

ಮಡಿಕೇರಿ: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡ ನಾಡು ನುಡಿ, ಪರಂಪರೆ ಹಾಗೂ ಸಂಸ್ಕೃತಿ ಬಿಂಬಿಸುವ ನಿಟ್ಟಿನಲ್ಲಿ ಇದೇ ಅ೨೮ ರಂದು ಬೆಳಗ್ಗೆ ೧೧ ಗಂಟೆಗೆ ಜಿಲ್ಲೆಯಾದ್ಯಂತ ಕೋಟಿ ಕಂಠ ಗೀತ ಗಾಯನ’ವನ್ನು ಜಿಲ್ಲಾಡಳಿತ, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಆಯೋಜಿಸಲಾಗಿದ್ದು, ಪ್ರತಿಯೊಬ್ಬರೂ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮನವಿ ಮಾಡಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ’ಕೋಟಿ ಕಂಠ ಗೀತ ಗಾಯನ’ ಸಂಬಂಧ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಳೆದ ವರ್ಷದಂತೆ ಈ ವರ್ಷವು ವಿಶೇಷವಾಗಿ ರಾಜ್ಯೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಆ ನಿಟ್ಟಿನಲ್ಲಿ ನನ್ನ ನಾಡು-ನನ್ನ ಹಾಡು’ ಎಂಬ ಶೀರ್ಷಿಕೆಯಡಿ ರಾಷ್ಟ್ರಕವಿ ಕುವೆಂಪುರವರು ಬರೆದಿರುವ ನಾಡಗೀತೆಯೊಂದಿಗೆ ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ’, ಡಾ.ಡಿ.ಎಸ್.ಕರ್ಕಿ ಅವರ ಹಚ್ಚೇವು ಕನ್ನಡದ ದೀಪ’, ನಾಡೋಜ ಡಾ.ಚೆನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾಚೇತನ’, ಡಾ.ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡುಗಳನ್ನು ಹಾಡಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿಗಳು, ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.


ಪ್ರತೀ ಗ್ರಾ.ಪಂ.ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಸಾವಿರ ಜನರು ನೋಂದಣಿ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ತಾ.ಪಂ.ಇಒಗಳು ಹೆಸರು ನೋಂದಣಿಗೆ ಮುಂದಾಗಬೇಕು. ಆಯಾಯ ಸ್ಥಳದಲ್ಲಿಯೇ ಏಕಕಾಲಕ್ಕೆ ಒಂದೆಡೆ ಸೇರಿ ಈ ಹಾಡುಗಳನ್ನು ಹಾಡಬೇಕಿದೆ. ಗ್ರಾ.ಪಂ.ಗಳು, ಶಾಲಾ ಕಾಲೇಜುಗಳು, ವೈದ್ಯಕೀಯ ಕಾಲೇಜು, ಸಂಘ ಸಂಸ್ಥೆಗಳು, ಮಹಿಳಾ ಸಂಘಗಳು, ಕನ್ನಡ ಸಾಹಿತ್ಯ ಪರಿಷತ್ತು, ಉನ್ನತ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಪ್ರೌಢ ಶಾಲಾ ಶಿಕ್ಷಣ ಸಂಜೀವಿನಿ ಸಂಘಗಳು, ಹೀಗೆ ಎಲ್ಲರೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಲಾಗಿರುವ ಕೋಟಿ ಕಂಠ ಗೀತ ಗಾಯನ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.


ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಮಾತನಾಡಿ, ಶಾಲಾ ಕಾಲೇಜುಗಳು, ವೈದ್ಯಕೀಯ ಕಾಲೇಜು ಸೇರಿದಂತೆ ಎಲ್ಲೆಡೆ ಕಾರ್ಯಕ್ರಮ ಆಯೋಜಿಸುವಂತಾಗಬೇಕು. ಇದೊಂದು ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಎಲ್ಲರೂ ಕೈಜೋಡಿಸುವಂತೆ ಸೂಚಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ, ಗಾಯನಕ್ಕೆ ಆನ್‌ಲೈನ್ https://kannadasiri.karnataka.gov.in/kkg/public ನಲ್ಲಿ ನೋಂದಣಿ ಮಾಡಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.


ಸಭೆಯಲ್ಲಿ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಷೇಕ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಆರ್‌ಸಿಎಚ್ ಅಧಿಕಾರಿ ಗೋಪಿನಾಥ್, ಬಿಸಿಎಂ ಅಧಿಕಾರಿ ಎನ್.ಮಂಜುನಾಥ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಮೋಹನ್ ಕುಮಾರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರಮೋದ್, ತಹಶೀಲ್ದಾರ್ ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net