ಏಳು ದಶಕದ ನಂತರ ಸಿಂಧೂರ ಶ್ರೀ ವೀರಭದ್ರೇಶ್ವರ ಸ್ವಾಮಿ ಅದ್ದೂರಿ ಜಾತ್ರೆ

bhr kenda
ಬಿದರೆ ಗ್ರಾಮದ ಸಿಂಧೂರ ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಕೆಂಡಾರ್ಚನೆ ನಡೆಯಿತು.
Published on

ಬಾಳೆಹೊನ್ನೂರು: ಖಾಂಡ್ಯ ಹೋಬಳಿ ಬಿದರೆ ಗ್ರಾಮದ ಸಿಂಧೂರ ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಕೆಂಡಾರ್ಚನೆ ಎಪ್ಪತ್ತು ವರ್ಷಗಳ ಬಳಿಕ ಅದ್ದೂರಿಯಾಗಿ ನಡೆದು ಮಂಗಳವಾರ ಸಂಪನ್ನಗೊಂಡಿತು.

ಪರಶಿವನ 25 ಲೀಲೆಗಳಲ್ಲಿ 12ನೇ ಲೀಲೆಯಾದ ವೀರಭದ್ರನ ಲೀಲೆ ಪ್ರಸಿದ್ಧಿಯಾಗಿದೆ. ಖಾಂಡ್ಯ ಹೋಬಳಿ ಬಿದರೆ ಗ್ರಾಮದಲ್ಲಿ ಸಿಂಧೂರ ಶ್ರೀ ವೀರಭದ್ರಸ್ವಾಮಿ ಗುಹಾಂತರ ದೇವಾಲಯದಲ್ಲಿ ನೆಲೆನಿಂತ ಐತಿಹಾಸಿಕ ಕ್ಷೇತ್ರ. ಸುಮಾರು 500 ವರ್ಷಗಳಿಗೂ ಹಿಂದಿನ ಇತಿಹಾಸವನ್ನು ದೇವಾಲಯ ಹೊಂದಿದ್ದು, ಸ್ಥಳೀಯವಾಗಿ ಇರುವ ಗುರು ಪರದೇಶಪ್ಪನವರ ಮಠದೊಂದಿಗೆ ಈ ದೇವಾಲಯ ಅವಿನಾಭಾವ ಸಂಬಂಧ ಹೊಂದಿದೆ.
ಕ್ಷೇತ್ರದಲ್ಲಿ ಎಪ್ಪತ್ತು ವರ್ಷಗಳಿಂದ ಸಿಂಧೂರ ವೀರಭದ್ರೇಶ್ವರ ಸ್ವಾಮಿ ಜಾತ್ರೆ ಹಾಗೂ ಕೆಂಡಾರ್ಚನೆಯ ಧಾರ್ಮಿಕ ವಿಧಿಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದವು. ಗ್ರಾಮದಲ್ಲಿ 1955ರಲ್ಲಿ ಕಡೆಯದಾಗಿ ಸಿಂಧೂರ ವೀರಭದ್ರಸ್ವಾಮಿ ಜಾತ್ರೆ ನಡೆದಿತ್ತು ಎಂದು ಗ್ರಾಮದ ಹಿರಿಯ ಪಟ್ನ ರಾಮೇಗೌಡ ಪತ್ರಿಕೆಗೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನನಗೆ ಎಂಟು ವರ್ಷ ಆಗಿದ್ದಾಗ ಕಡೆಯದಾಗಿ ಜಾತ್ರೆ ನಡೆದಿತ್ತು. ರಥೋತ್ಸವ ನಡೆದ ಜಾಗಕ್ಕೆ ಇಂದಿಗೂ ತೇರು ಬೀದಿ ಎಂದು ಕರೆಯುತ್ತಾರೆ. ಜಾತ್ರೆ ನಡೆದ ಸಂದರ್ಭದಲ್ಲಿ ಯಾರಾದರೂ ಗಲಾಟೆ, ಘರ್ಷಣೆ ಮಾಡಿದರೆ ಅವರನ್ನು ಕಟ್ಟಿಹಾಕಲು ಇದ್ದ ಜಾಗದ ಕುರುಹು ಈಗಲೂ ಇದೆ. ಇದರೊಂದಿಗೆ ಋಷಿ ಮುನಿಗಳು ವಾಸಿಸಿದ ಗುಹೆ, ತ್ರಿಮೂರ್ತಿ ಇರುವ ಬ್ರಹ್ಮನ ಗದ್ದುಗೆಯೂ ಇದೆ. ಇದು ಇಲ್ಲಿನ ಇತಿಹಾಸ ಹೇಳುತ್ತದೆ ಎನ್ನುತ್ತಾರೆ ರಾಮೇಗೌಡ.
ಈ ಬಾರಿ ಗುರು ಪರದೇಶಪ್ಪನವರ ಮಠದ ಧರ್ಮಾಧಿಕಾರಿ ಪಿ.ಎಸ್.ಮಹಾದೇವಯ್ಯನವರ (ಮಧುಕುಮಾರ್ ಶಾಸ್ತ್ರಿ) ಮಾರ್ಗದರ್ಶನದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಒಗ್ಗೂಡಿ ಜಾತ್ರಾ ಮಹೋತ್ಸವ ಆರಂಭಿಸುವ ನಿರ್ಧಾರ ಕೈಗೊಂಡರು. ಅದರಂತೆ ಮೇ 26ರಿಂದ 28ರವರೆಗೆ ಹಿಂದಿನ ಧಾರ್ಮಿಕ ವಿಧಿಗಳಂತೆ ನಡೆಸುವ ಸಂಕಲ್ಪ ಮಾಡಿದರು.
ಭಾನುವಾರ ಧಾರ್ಮಿಕ ವಿಧಿಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಗಂಗಾಪೂಜೆ, ಗಣಪತಿ ಪೂಜೆ, ಪುಣ್ಯಾಹವಾಚನ, ಪರಿವಾರ ದೇವತಾರಾಧನೆ, ಏಕದಶಕಲಶಾರಾಧನೆ, ರುದ್ರಾಭಿಷೇಕ, ಗಣಹೋಮ, ವಾಸ್ತು ಹೋಮ, ರುದ್ರ ಹೋಮ, ಲಘು ಚಂಡಿಕಾ ಯಾಗ, ರಾಕ್ಷೋಘ್ನ ಬಲಿ, ವಾಸ್ತು ಬಲಿ, ಅಷ್ಟೋತ್ತರ ಪೂಜೆ ನಡೆಸಲಾಯಿತು.
ಸೋಮವಾರ ಗುರು ಪರದೇಶಪ್ಪನವರ ಮಠದಿಂದ ಸ್ವಾಮಿಯ ಉತ್ಸವ ಹೊರಟು ಸಿಂಧೂರ ವೀರಭದ್ರೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ನಡೆಸಿ ಸುಗ್ಗಿ ಕಟ್ಟೆಯಲ್ಲಿ ಉತ್ಸವ ಕೂರಿಸಲಾಯಿತು. ನಂತರ ರುದ್ರಗಿರಿಯಲ್ಲಿ ಹಚ್ಚುವುದು ಹಾಗೂ ಗ್ರಾಮಸ್ಥರಿಂದ ಸುಗ್ಗಿ ಕುಣಿತ ನಡೆಸಲಾಯಿತು.
ಮಂಗಳವಾರ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ, ಅಷ್ಟೋತ್ತರ ನೆರವೇರಿಸಿ ಕೆಂಡಾರ್ಚನೆ ನಡೆಸಲಾಯಿತು. ವೀರಭದ್ರ ಸ್ವಾಮಿ ಹಾಗೂ ಕೊಪ್ಪದ ರುದ್ರೇಶ್ವರ ಸ್ವಾಮಿಯ ಉತ್ಸವಮೂರ್ತಿ ಕೆಂಡ ಹಾಯ್ದ ಬಳಿಕ ಭಕ್ತರು ಕೆಂಡ ಹಾಯ್ದರು. ನಂತರ ದೇವರಿಗೆ ಮಹಾಮಂಗಳಾರತಿ ನೆರವೇರಿಸಿ ತೀರ್ಥ, ಪ್ರಸಾದ ವಿನಿಯೋಗ ಮಾಡಲಾಯಿತು.
ಜಾತ್ರೆಯಲ್ಲಿ ಬಿದರೆ, ಗುಂಡಿಹೊಂಬಳ, ಬ್ಯಾಡಿಗೆರೆ, ಗಂಡಿ, ಸಿದ್ದಾಪುರ, ಪಟ್ನ, ಉಜ್ಜಿನಿ, ಕಡಬಗೆರೆ, ಬಾಸಾಪುರ, ಪರದೇಶಪ್ಪನ ಮಠ, ಬೊಗಸೆ, ಕಡವಂತಿ, ಬಿಳಗೊಳ, ಬಾಳೆಹೊನ್ನೂರು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net