

ಉಡುಪಿ: ಕಾವಿ ಕಲೆ ಪುರಾತನ ಕಲಾ ಪ್ರಕಾರಗಳಲ್ಲಿ ಒಂದಾಗಿದ್ದು, ಅದರ ರಕ್ಷಣೆಯಲ್ಲಿ ತೊಡಗಿರುವ ಡಾ. ಜನಾರ್ದನ್ ರಾವ್ ಹಾವಂಜೆ ಅವರ ಕಾರ್ಯ ಅನನ್ಯವಾದುದು. ಮುಂದಿನ ಪೀಳಿಗೆಗಾಗಿ ಈ ಕಲೆಯನ್ನು ರಕ್ಷಣೆ ಮಾಡಬೇಕಾದ ಅಗತ್ಯತೆ ಇದೆ ಎಂದು ಕಾಪೋರ್ರೇಷನ್ ಬ್ಯಾಂಕ್ನ ನಿವೃತ್ತ ಡಿಜಿಎಂ ಸಿ.ಎಸ್. ರಾವ್ ಆಶಯ ವ್ಯಕ್ತಪಡಿಸಿದರು.
ಉಡುಪಿ ಕುಂಜಿಬೆಟ್ಟಿನಲ್ಲಿರುವ ಶಾರದಾ ಕಲ್ಯಾಣ ಮಂಟಪದ ಕೆ.ಆನಂದ ರಾವ್ ಹಾಲ್ ಗ್ಯಾಲರಿಯಲ್ಲಿ ಭಾವನಾ ಪೌಂಡೇಷನ್ ಹಾವಂಜೆ, ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಾಗೂ ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ ಆಶ್ರಯದಲ್ಲಿ ಡಾ. ಜನಾರ್ದನ್ ರಾವ್ ಹಾವಂಜೆ ಅವರ "ಸಿಂಧೂರ' ಕಾವಿ ಕಲೆಯಲ್ಲಿ ಚಿತ್ರಿಸಿರುವ ನವದುರ್ಗೆಯರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಶಿರಸಿಯ ಮಾರಿಕಾಂಬಾ ಗುಡಿ ಸೇರಿದಂತೆ ಕೆಲ ಪುರಾತನ ದೇಗುಲಗಳಲ್ಲಿ ಮಾತ್ರ ಈ ಕಲೆಯನ್ನು ಕಾಣಬಹುದಾಗಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ವಿವಿಧ ಪ್ರಕಾರದ ಪೇಂಟಿಂಗ್ ದಾಳಿಯಿಟ್ಟಿದ್ದು, ಪುರಾತನ ಕಲೆಗಳು ನಶಿಸುವಂತಾಗಿದೆ. ಈ ನಡುವೆ ಯುವ ಕಲಾವಿದ ಜನಾರ್ದನ್ ಅವರು ಕಾವಿ ಕಲೆ ಉಳಿಸುವ ಮೂಲಕ ಭಾರತಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
24ರ ವರೆಗೆ ಪ್ರದರ್ಶನ:
ನವರಾತ್ರಿ ಸಂದರ್ಭದಲ್ಲಿ ಪೂಜಿಸಲ್ಪಡುವ ಒಂಬತ್ತು ದೇವಿಯರ ಕಾವಿ ಕಲೆಯ ಚಿತ್ರವನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಅ.24ರ ವರೆಗೂ ಪ್ರದರ್ಶನ ವೀಕ್ಷಣೆ ಹಾಗೂ ಖರೀದಿಗೆ ಅವಕಾಶ ಇದೆ ಎಂದು ಆಯೋಜಕರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿಯ ಲೆಕ್ಕ ಪರಿಶೋಧಕ ಗಣೇಶ್ ಹೆಬ್ಬಾರ್, ನಿರ್ದೇಶಕ ಹಾವಂಜೆ ಮಂಜುನಾಥ ರಾವ್, ಶ್ರೀ ಸ್ಥಾನಿಕ ಬ್ರಾಹ್ಮಣ ಸಂದ ಅಧ್ಯಕ್ಷ ಕೆ.ಮಂಜುನಾಥ ಹೆಬ್ಬಾರ್, ಹಿರಿಯರಾದ ಕೆ.ಪಿ. ರಾವ್. ಯಕ್ಷಗುರು ಹಾವಂಜೆ ಮಂಜುನಾಥಯ್ಯ, ವಿದುಷಿ ಅಕ್ಷತಾ ವಿಶುರಾವ್, ವರ್ಷಾ ಎ.ಜೆ. ಇತರರಿದ್ದರು. ಶ್ರೀ ಸ್ಥಾನಿಕ ಬ್ರಾಹ್ಮಣ ಸಂದ ಕಾರ್ಯದರ್ಶಿ ಪಿ.ಪ್ರಭಾಕರ ಭಂಡಿ ನಿರೂಪಿಸಿದರು.